ಶುಕ್ರವಾರ, ಮೇ 11, 2018


                                                                              
                                                                                   ಕಥೆ                    15.5.18
 ನಾಳಿನ ಸಂಜೆ ಬಣ್ಣಗಳ ಮೂಡಿಸುವುದೇ.....?

                
                    'ನಿನ್ ಮಾತಿನ್ ತಲೆಬುಡ ನಂಗರ್ಥ ಆಗ್ತಿಲ್ವೇ...'
               'ನಂಗೇ ಒಂದೊದ್ಸಲ ಅರ್ಥ ಆಗ್ತಿಲ್ಲ, ನಿಂಗೆ ಹೀಗನ್ಸಿದ್ರಲ್ಲಿ ಆಶ್ಚರ್ಯ ಇಲ್ಲ ಬಿಡು.' ಮಾತು ನಿಲ್ಲಿಸಿ ಮೌನವಾದ ಶಕ್ಕೂಳನ್ನೇ ನೋಡಿದೆ. ತಲೆ ಕೆಳಗೆ ಹಾಕಿದ್ದರೂ, ಕಪ್ಪುಕಂಗಳ ಕೊಳ ಕಲಕಿದೆ. ಅಲ್ಲಿ ನೀರಾಡುತ್ತಿದೆ ಎನ್ನೋದು ಶತಃಸ್ಸಿದ್ಧ.  ಶಕುಂತಳೆ ಬರುಬರುತ್ತಾ ಯಾಕ್ಹೀಗೆ ನಿಗೂಢವಾಗ್ತಿದಾಳೆ ಅನ್ನೋದು ಕೆಲದಿನದಿಂದ ಒಗಟೇ... ದಿನ ಜಪ್ಪಿಸಿ ಕೇಳಿದಾಗ  ಉತ್ತರವೇನೋ ಬಂದಿದೆ. ಆದರೂ, ಅಲ್ಲಿ ಸ್ಪಷ್ಠತೆಯಿಲ್ಲ. ಇವಳಲ್ಲಿ ಇಂತಹ ದ್ವಂದ್ವ...! ನನಗೆ ನಂಬಲಾಗುತ್ತಿಲ್ಲ...
               'ಬದುಕು ಯಾಕ್ಹೀಗೆ ಆಟವಾಡ್ಸುತ್ತೆ, ಆಡಿಸ್ಬೇಕು...?' ಶಕ್ಕೂ ನನ್ನ ನೋಡಿ ಪ್ರಶ್ನೆ ಕೇಳಿರಲಿಲ್ಲ. ಗೋಡೆಯ ಮೇಲಿದ್ದ ರಾಧಾಕೃಷ್ಣರ ಫೋಟೋ ನೋಡುತ್ತಿದ್ದಳು. ಮುಖದಲ್ಲಿ ಗೊಂದಲ, ತಳಮಳ ಕಂಡರೂ, ಪಟವನ್ನೇ ನೋಡುವಾಗ ಎಂಥದ್ದೋ ತೆಳು ಮಂದಹಾಸವೂ ಅಲ್ಲಿದೆ ಅಂತ ಅವಳನ್ನು ನೋಡುತ್ತಿದ್ದ ನನಗೆ ಅನ್ನಿಸಿದ್ದು ಭ್ರಮೆಯಾ ಅಥವಾ ನಿಜವಾ....? ಇವಳಿಗೇನಂಥ ತಾಪತ್ರಯ, ಸುಖವಾಗಿಯೇ ಇದ್ದಾಳೆ ಎಂದೇ ನಾನಿಲ್ಲಿವರೆಗೂ ನಂಬಿದ್ದು. ಆದರೀಗ ಒಂದಿಷ್ಟು ದಿನಗಳಿಂದ...? ನಿನ್ನೆ ದಿಢೀರನೆ ಬಂದಿಳಿದಳು ನನ್ನ ಮನೆಗೆ, ಅದೂ ತಾಯಿಮನೆಗೆಂದು ಬಂದ ಮರುದಿನವೇ. 'ನಿನ್ಹತ್ರ ತುಂಬ ಮಾತಾಡ್ಬೇಕು...' ಎನ್ನುತ್ತಾ, ಈಗ ಹೀಗೆ ಒಗಟೊಗಟಾಗಿ ಮಾತಾಡುವಾಗ...!
               'ಶಕ್ಕೂ, ನಿಂಗೇನೇ ಆಗಿದೆ. ನೀನು ಹೀಗಿದ್ದೋಳೇ ಅಲ್ಲ. ಸದಾ ಕಿಲಕಿಲ ಅಂತ ನಕ್ಕೊಂಡ್ ಇರ್ತಿದ್ದೀ. ಈಗ್ನೋಡಿದ್ರೆ, ಮಂಕು ಹಿಡ್ದಿರೋ ಥರ ಇದ್ದೀ. ಅಸಂಬದ್ಧವಾಗಿ ಮಾತಾಡ್ತಿದ್ದೀ. ನೀ ಸುಖವಾಗೇ ಇದೀಯ ಅಂತ ನಾನಂದ್ಕೊಂಡಿದ್ದೀನಪ್ಪ. ಆದ್ರೆ, ನಿನ್ನ ನೋಡಿದ್ರೆ...' ನನ್ನ ಮಾತು ಪೂರೈಸಲಿಲ್ಲ.
               'ಮದ್ವೆ ಆಗಿ ಒಂದಷ್ಟು ಕಾಲವಾಯ್ತಲ್ಲೇ...' ಅವಳ ಮಾತು ವಿಚಿತ್ರ ಎನ್ನಿಸಿಬಿಟ್ಟಿತು. ಮುಖದಲ್ಲೇನೂ ಹೆಚ್ಚಿನ ವ್ಯತ್ಯಾಸ ಕಾಣಲಿಲ್ಲ. ಮಾತಿಗರ್ಥ...!!.......
                                                                           *             *             *
               'ದುಷ್ಯಂತ್-ಶಕುಂತಳ...ಮೇಡ್ ಫಾರ್ ಈಚ್ ಅದರ್...' ನಾನೇ ಹೀಗೆ ಅವರ ಬಳಿ ಹೇಳಿದ್ದೆ.........
               'ಅರೇ, ಏನೇ ಇದು ಜಗತ್ತಿನ ಎಂಟನೇ ಅದ್ಭುತ. ನಿನ್ನ ವುಡ್ಬಿ ಹೆಸ್ರು ದುಷ್ಯಂತ್, ಮೈ ಗಾಡ್, ದಿಸ್ ಈಸ್ ರಿಯಲಿ ಆಸಮ್....' ಫೋನಲ್ಲಿ ಹೆಚ್ಚುಕಮ್ಮಿ ಕಿರುಚಿದ್ದೆ. ' , ಅಷ್ಟು ಎಗ್ಸೈಟ್ ಆಗ್ಬೇಡ. ಇದೇನೂ ಆಸಮ್ಮೂ ಅಲ್ಲ, ಈಸಮ್ಮೂ ಅಲ್ಲ, ಯಾಕೆಂದ್ರೆ, ಅವನ ನಿಜವಾದ ಹೆಸರು ಶೇಖರ್. ನಂಗ್ಯಾಕೋ ಹೆಸರು ಇಷ್ಟ ಇರ್ಲಿಲ್ಲ, ಹಾಗೇ ಹೇಳ್ದೆ. ಅವನೋ ಶಕುಂತಳೆಯನ್ನು ಕಂಡು ಹುಚ್ಚನಾಗಿರೋ ದುಷ್ಯಂತ...! ಮರುದಿನ ಫೋನ್ ಬಂತು ಎತ್ತಿದೆ. 'ಹಲೋ, ದುಷ್ಯಂತ್ ಹಿಯರ್...' ಧ್ವನಿ ಕೇಳಿತು. ' ಮೇ ....' ನಾನು ಮಾತು ಮುಗಿಸಿರಲಿಲ್ಲ. 'ಹೇ ಡಿಯರ್ ಶಕುಂತಳೆ ದಿಸ್ ಈಸ್ ದುಷ್ಯಂತ್...' ಶೇಖರನ ಜೇನಿನ ದನಿ ಕೇಳಿತು. 'ಏಯ್ ಏನಿದು...?' ನೀನೀಗ ಆದಂತೆ ನಾನೂ ಎಗ್ಸೈಟ್ ಆಗಿ ಕೇಳಿದೆ. ಏನ್ ಹೇಳ್ದಾ ಗೊತ್ತಾ, 'ಶೇಖರ್ ಹೆಸ್ರು ನಿಂಗಿಷ್ಟ ಇಲ್ವಲ್ಲ. ಅದಕ್ಕೆ ಶಕುಂತಳೆಗೆ ದುಷ್ಯಂತನೇ ಸರಿ ಅಂತ ಬದ್ಲಾಯ್ಸಿಬಿಟ್ಟೆ. ಹ್ಯಾಪ್ಪೀ...'
               'ವಾಹ್, ಎಂಥ ಪ್ರೇಮಿಯೇ, ಇದು 'ಆಸಮ್ಮೇ'.. ನೀ ಏನ್ ಹೇಳ್ದೆ..?' .........
                                                            *             *             *

        ಥಟ್ಟಂತ ಎದೆಯಾಳದ ಕತ್ತಲಲ್ಲಿ ಹುದುಗಿದ್ದ ನನ್ನದೇ ಮಾತಿನ ನೆನಪೊಂದು 'ಫಳ್' ಎಂದು ಮಿಂಚಿದಂತಾಗುವಾಗಲೇ,   'ಅದು ಸುಳ್ಳು, ಅವನು ದುಷ್ಯಂತನಲ್ಲ...' ಗುಹೆಯಿಂದ ಬಂದಿತ್ತು  ಶಕ್ಕೂ ಮಾತು.  ನಾನು ಬೆಚ್ಚಿದೆ.
               ಹೀಗೆಂದವಳನ್ನೇ ದಿಟ್ಟಿಸಿದರೆ, ಅವಳ ಕಂಗಳು ಮತ್ತೆ ರಾಧಾಕೃಷ್ಣರ ಚಿತ್ರದ ಕಡೆಗಿತ್ತು. ಎದೆ ಒಂದೇಸಮನೆ ಏರಿಳಿಯುತ್ತಿತ್ತು. ಕ್ಷಣ ಅವಳ ಸ್ಥಿತಿಗೆ ಗಾಬರಿಯಾಯ್ತು. 'ಶಕ್ಕೂ, ಏನಾಯ್ತೇ...?' ಮೆಲ್ಲನೆ ಭುಜ ಬಳಸಿದೆ, ಅವಳ ಕೆನ್ನೆ ತಟ್ಟಿದೆ, ಬೆರಳಲ್ಲಿ ಅವಳ ಬೆರಳುಗಳ ಹಿಡಿದೆ. ಅವು ತೆಳ್ಳಗಿನ ನಡುಕದಲ್ಲಿದ್ದಂತೆ ಭಾಸವಾಯ್ತು. ಕೇಳಿಸಿತಾ ಅವಳಿಗೆ ನನ್ನ ಮಾತು, ಇಲ್ಲವಾ...? ಏನೋ ಅಯೋಮಯ ಸ್ಥಿತಿ ಅವಳದ್ದು. 'ಶಕ್ಕೂ...' 'ಹ್ಞಾಂ...' ಬೆಚ್ಚಿ ನನ್ನ ನೋಡಿದ ಕಪ್ಪುಕಂಗಳಕೊಳ ಕಲಕಿದಂತೆ ತೇವ ಕಂಡಿತು. 'ಏನೇ, ತೀರಾ ಒಗಟಾಗ್ತಿದ್ದೀ...'
               'ನೀನೇನೆಂದೆ..?' ಪ್ರಶ್ನೆಗೊಂದು ಪ್ರಶ್ನೆ ಎದ್ದಿತು ಒಡಲಗೋರಿಯಿಂದ.
               'ಶೇಖರ್ ದುಷ್ಯಂತನಲ್ಲ ಎಂದಿದ್ದರ ಅರ್ಥವೇನೇ...?'
               'ಅವನು ದುಷ್ಯಂತನೇ ಹೌದು' ನನಗೆ ತೀರ ಗೊಂದಲವಾಯ್ತು. ಅವಳನ್ನೇ ನಿಸ್ಸಹಾಯಳಾಗಿ ನೋಡಿದೆ. ಇವಳ ಯಾವ ಮಾತು ನಿಜ, ಅಲ್ಲವೆಂದಿದ್ದೋ...ಹೌದೆಂದಿದ್ದೋ... ನನ್ನ ನಡುಮನೆಯಲ್ಲಿ ಧುತ್ತನೆ ನೀರವಮೌನ ತುಂಬಿಕೊಂಡು ನನಗೇ ಉಸಿರುಗಟ್ಟಿದಂತೆನ್ನಿಸಿತು. ಹೊರಗೆ ಹನಿಯುತ್ತಿದ್ದ ಮಳೆ ಜೋರಾಗಿ ಕುಂಭಕೋಣ ವರ್ಷಧಾರೆಯಾಗುವ ಸೂಚನೆಯಾಗಿ ಗಾಳಿಯ ರಭಸ ಹೆಚ್ಚಿತು. ಬಾಗಿಲು-ಕಿಟಿಕಿಗಳು ದಢ್ದಢ್ ಎಂದು ಹೊಡೆದುಕೊಂಡವು. ತಟ್ಟನೆದ್ದೆ. ಎಲ್ಲವನ್ನೂ ಮುಚ್ಚಿಬಂದಾಗ,
               'ಪಾರೂ, ಬದುಕಿನಲ್ಲಿ ಪ್ರೀತಿ ಪಲ್ಲವ ಆಗೋದು ಒಂದುಬಾರಿ ಮಾತ್ರನಾ...?' ಈಗ ಶಕ್ಕೂ ಶಕುಂತಳೆಯ ಹಾಗೆ ಕಾಣಿಸಿದರೂ, ಪ್ರಶ್ನೆ ನನ್ನನ್ನು ಕಂಗೆಡಿಸಿತು. ಇದೇನು ಪ್ರಶ್ನೆ, ಯಾಕೆ, ಹೇಗೆ ಎನ್ನುವುದು ಅರ್ಥವಾಗದೆ, ತಮಾಶೆಯಿರಬಹುದೇ ಎಂದು ನಕ್ಕುಬಿಟ್ಟೆ.
               'ಪ್ಲೀಸ್ ಹೇಳೆ, ಬದುಕಲ್ಲಿ ಒಮ್ಮೆ ಮಾತ್ರ ಪ್ರೀತಿಸ್ಬೇಕಾ..? ಪ್ರೀತಿ ಎಂದುಕೊಂಡಿದ್ದು ಕೆಂಡದಂತೆ ಸುಡುವಾಗ, ಸೆಲೆಯೆಲ್ಲ ಇಂಗಿ ಎದೆಯಂಗಳ ಬರಡಾದಾಗ, ನಳನಳಿಸುವ ಚಿಗುರೆಲ್ಲ ಸುಟ್ಟು ಕರಕಾದಾಗ ಅದನ್ನೂ ಪ್ರೀತಿಯೆಂದೇ ಕರೀಬೇಕಾ, ಯುಗಯುಗಗಳ ಪ್ರೀತಿ ಇದೆಂದು ಹೊಸತರಲ್ಲಿ ಗಳಹಿದ್ದೆಲ್ಲ ಭ್ರಮೆ ಎನ್ನಬೇಕಾ...? ಪ್ರೀತಿ ಸುಟ್ಟು ಮತ್ತೆಂದೂ ಅಲ್ಲಿ ಗರಿಕೆಯೂ ಹುಟ್ಟಲಾರದು ಎನ್ನುವ ಬೂದಿಯಗುಡ್ಡೆ ಎನ್ನಬೇಕಾ ಅಥವಾ ಬೂದಿಯಿಂದಲೂ ಫೀನಿಕ್ಷ್ ಪಕ್ಷಿಯೊಂದು ಹುಟ್ಟಿದಂತೆ ಮತ್ತೆ ಪ್ರೀತಿಚಿಗುರು ಹುಟ್ಟೀತೆಂದು ಕಾಯಬೇಕಾ...? 
               ಅವನು ದುಷ್ಯಂತನಲ್ಲ, ಕಣ್ವಪುತ್ರಿಯ ಕಂಗಳಲ್ಲಿ ಕಂಡ ನೀರಜಕ್ಕೆ ಮರುಳಾಗಿ ಬಂದ ಕಪ್ಪುದುಂಬಿ ಅಷ್ಟೆ. ದುಂಬಿ ಎಂದಾದರೂ ಒಂದೇ ಕಡೆ ಕೂತಿದ್ದು ಕಂಡಿದ್ದೀಯಾ....?
               ಅವನು ದುಷ್ಯಂತನೇ ಹೌದು. ಶಕ್ಕೂಗೆ ಯಾವ ದೂರ್ವಾಸರ ಶಾಪವಿತ್ತೋ ತಿಳಿಯದು, ದುಷ್ಯಂತನ ಮನದಂಗಳದಿಂದ, ಹೃದಯಸಿಂಹಾಸನದಿಂದ ವಿಸ್ಮರಣೆಗೊಳಗಾಗಿದ್ದಾಳೆ...'
               ನನ್ನ ಕಿವಿಗಳಿಗೆ ಸ್ವಗತದ ಅಸಂಬದ್ಧ ಮಾತುಗಳು ಬಿದ್ದವು. ಅಸಂಬದ್ಧವಲ್ಲದೇ ಮತ್ತೇನು, ದುಷ್ಯಂತ ಹೌದೆನ್ನುತ್ತ- ಅಲ್ಲವೆನ್ನುತ್ತ, ರಾಧಾಕೃಷ್ಣರ ಚಿತ್ರದೆಡೆ ನೆಟ್ಟ ದೃಷ್ಟಿ ಕದಲಿಸದೆ ಕೂರುವ  ಶಕುಂತಳೆ ನನ್ನ ಜೀವಗೆಳತಿ ಶಕ್ಕೂನೇ ಹೌದಾ...?
                                                            *             *             *

               .........''ದುಷ್ಯಂತನ ಪ್ರೀತಿಯಲ್ಲಿ ಕೊಚ್ಚಿಹೋಗಿದ್ದೀನಿ ಪಾರೂ. ನಾನು ಮಧುವಂತಿ- ಅವನು ಮಧುಕರ...! ಹೀಗೊಂದು ಪ್ರೀತಿ-ಪ್ರಣಯ ಭೂಮಿ ಮೇಲೆ ಇರಲು ಸಾಧ್ಯವೇನೇ...? ಭೂಮ್ಯಾಕಾಶಗಳನ್ನು ಬೆಸೆದಿರುವ ಇಂದ್ರಚಾಪದ ಬಣ್ಣಗಳಲ್ಲಿ ನನ್ನ ಶರೀರ ಥಳಥಳನೆ ಹೊಳೆಯುತ್ತಿರೋದು ನಿಂಗೆ ಕಾಣಲ್ಲ ಅಲ್ವಾ, ಯಾಕೆಂದ್ರೆ, ನಾನು ನಿನ್ನಿಂದ ದೂರದಲ್ಲಿದೀನಿ. ಆದರೆ, ನನ್ನ ದನಿಯಲ್ಲಿ ತುಂಬಿರೋ ಅಮಲಿನದನಿ, ನಶೆ, ಹೊಚ್ಚಹೊಸತನ...! ಓಹ್, ಎಲ್ಲ ರಭಸದಿಂದ ಧುಮ್ಮಿಕ್ಕೋ ಮಾಯಾಜಲಪಾತ ಕಣೇ ಪಾರೂ. ನನಗೆ ಮೂಡಣ-ಪಡುವಣದಲ್ಲಿ ಸದಾ ರಂಗಿನ ಓಕುಳಿಯೇ ಕಾಣ್ತಿದೆ. ಮನಾಲಿಯ ಹಸಿರು, ಧವಳಹಿಮ, ಅಲ್ಲಿ ನಾನು-ಇವನು, ಸ್ವರ್ಗ ನನ್ನ ಕಾಲಡಿಯಲ್ಲಿ ...''.......
                                                                           *             *             *

               ಮನಾಲಿಯ ಮಧುಚಂದ್ರದಲ್ಲಿ, ಶ್ವೇತಹಿಮದಹಾಸಿನಲ್ಲಿ ಅವನೊಡನೆ ಹೊರಳಾಡುತ್ತ, ಅವಳುಸುರಿದ ಮೇಲಿನ ಪ್ರೇಮೋನ್ಮತ್ತ ಮಾತುಗಳ ಉತ್ಸಾಹ ನನ್ನ ಕಿವಿಯಲ್ಲಿನ್ನೂ ಗುನುಗುತ್ತಿರುವಾಗಲೇ, ಈಗವಳ ಅಸಂಬದ್ಧ ಮಾತುಗಳು ತಲೆಯನ್ನು ಕಲಸುಮೇಲೋಗರ ಮಾಡಿಬಿಟ್ಟಿತು. ನಾನು ಅವಳ  ಮುಖ ನೋಡಿದೆ. ಇಳಿಬಿದ್ದ ಮುಂಗುರುಳು ಯಾವುದೋ ಲಹರಿಯಲ್ಲಿದ್ದಂತೆ ತೂಗುತ್ತಿತ್ತು. ಒಳಮನಸ್ಸು ಏನನ್ನೋ ಹೇಳಲು ಪದಗಳಿಗಾಗಿ ತಡಕಾಡುವಂತೆ ಮುಖದಲ್ಲಿ ಗೊಂದಲವಿತ್ತು. ಆದರೆ, ಇಜ್ಜೋಡು ದುಂಬಿಗಂಗಳು ಮಾತ್ರ ರಾಧಾಕೃಷ್ಣರ ಚಿತ್ರದತ್ತ ಚಿತ್ತನೆಟ್ಟು 'ಫಳ್ಳನೆ' ಮಿಂಚುತ್ತಿದ್ದವು..
               ಮೆಲ್ಲನೆ ಪಟದಿಂದ ನನ್ನೆಡೆಗೆ ತಿರುಗಿದಳು ಶಕ್ಕೂ. ಪುಟ್ಟದೊಂದು ನಗೆ ಬೀರಿದಳು. 'ಇದಕ್ಕೇನರ್ಥವೋ...?'  ನಾನು ಮೌನ  ಹೊದ್ದೆ.
               'ನಾನು ಒಗಟಾಗ್ತಿದೀನಿ ಅಂತ ಹೇಳಿದ್ಯಲ್ಲ ಪಾರೂ, ಹೌದು, ನನಗೂ ಹೀಗೇ ಅನ್ನಿಸ್ತಿದೆ; ಇದ್ದೂ ಇಲ್ಲದಂಥ ಭಾವ....ಉಂಡೂ ಉಣ್ಣದ, ಕಂಡೂ ಕಾಣದಂಥ ಅಯೋಮಯ ಸ್ಥಿತಿ....! ವಾಸ್ತವ-ಭ್ರಮೆಗಳ ತೂಗುಯ್ಯಾಲೆಯಲ್ಲಿ ಜೀಕ್ತಾ ಇದೀನಿ.... ಒಮ್ಮೆ ಭ್ರಮೆಯ ಜೀಕಿನಲ್ಲಿ ಎತ್ತರ, ಅದೆಷ್ಟು ಎತ್ತರಕ್ಕೆ ಹೋಗ್ತೀನಿ ಎಂದರೆ ಅಕ್ಷರಷಃ ಆಕಾಶದ ಅಂಚು ತಲುಪಿಬಿಟ್ಟೆ, ಅಲ್ಲೇ ನನ್ನ ಬದುಕು, ನಾನು-ನನ್ನ ಕನಸು ಇದಿಷ್ಟೇ ನನ್ನ ಮುಷ್ಠಿಯಲ್ಲಿ...! ನನ್ನನ್ನು ಕಂಗೆಡಿಸುವವರಾರೂ ಅಲ್ಲಿರೋಲ್ಲ, ಎಲ್ಲರೂ ಮಂಜಿನಂತೆ ಕರಗಿ ಹೋಗಿರ್ತಾರೆ... ಶ್ವೇತಬಿಳುಪಿನ ಲೋಕದಲ್ಲಿ ನಾನು ಕಿನ್ನರಿಯಾಗಿ............' ಅರಳುಗಂಗಳ ಕೇದಿಗೆಯ ಕುಡಿನೋಟ ಗೋಡೆಯ ಮೇಲಿನ ಪಟದತ್ತ ಮತ್ತೆ ಹರಿಯಿತು, ಮಾತು ಥಟ್ಟನೆ ನಿಂತೇಬಿಟ್ಟಿತು. ರೆಪ್ಪೆಯಂಚು ಒದ್ದೆಯಲ್ಲಿ ಫಳ್ಳನೆ ಅಳ್ಳಾಡಿತು. ಮತ್ತೆ ಕಳೆದುಹೋದವಳ ಭುಜ ಹಿಡಿದು 'ಶಕ್ಕೂ, ಏನಾಗಿದೆ ಬಿಡಿಸಿ ಹೇಳೆ ?' ಮೆಲ್ಲಗೆ ಕೇಳಿದೆ.
               ಹತ್ತುನಿಮಿಷ ಪಟವನ್ನೇ ದಿಟ್ಟಿಸುತ್ತಿದ್ದವಳೀಗ ಯಾವುದೋ ಮಾಯೆಯಲ್ಲಿದ್ದಂತೆ ನನ್ನೆಡೆಗೆ ತಿರುಗಿದಳು, 'ನೀನು ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ...' ಪ್ರಶ್ನಾತೀತಳಾಗಿದ್ದವಳಿಂದ ಮತ್ತೆ ಪ್ರಶ್ನೆಯೇ ಎದ್ದಿತು. ನನಗೆ ನಿಜಕ್ಕೂ ಅವಳ ಸ್ಥಿತಿ ಗಾಬರಿ ಹುಟ್ಟಿಸಿತು. 'ಯಾವ ಪ್ರಶ್ನೆ ಶಕ್ಕೂ..?'  `ಬದುಕಿನಲ್ಲಿ ಒಮ್ಮೆ ಮಾತ್ರ ಪ್ರೀತಿಸ್ಬೇಕಾ...?' ಕೇಳಿದವಳ ಧ್ವನಿ ನಡುಗುತ್ತಿತ್ತು, ತೆಳ್ಳಗೆ ರೋದಿಸುವಂತೆಯೂ ಅನ್ನಿಸಿತು, ಎದೆಯೊಳಗೆ ಭಾರದ ಕಪ್ಪುಬಂಡೆ ಒತ್ತಿ ಹಿಂಸಿಸುತ್ತಿರುವಂಥ ಯಾತನೆ ಮುಖದಲ್ಲಿತ್ತು, ತೀರಾ ದೈನ್ಯಳಾಗಿದ್ದಳು, ಕಣ್ಣುಗಳು ಇನ್ನೇನು ಕಣ್ಣೀರಪ್ರವಾಹವನ್ನು ಉಕ್ಕಿಸಿಯೇ ಬಿಡುವುದೆಂದು ಸೂಚಿಸುವಂತಿದ್ದವು....
               'ಶಕ್ಕೂ, ಹೀಗೆಲ್ಲಾ ಕೇಳಿದ್ರೆ ನಾನೇನು ಹೇಳ್ಲಿ, ಇಂಥದ್ದೊಂದು ಪ್ರಶ್ನೆಯ ಹಿನ್ನೆಲೆ ನಂಗೆ ತಿಳೀಬೇಕಲ್ವಾ..? ನಿನ್ನ ಮುದ್ದಾದ ಸಂಸಾರದಲ್ಲಿ ನೀ ಹೀಗೆ ಪ್ರಶ್ನೆ ಕೇಳ್ತೀಯಾ ಅಂದ್ರೆ ನಂಗೇ ನಂಬಕ್ಕಾಗ್ತಿಲ್ಲ. ಈಗ ನಿಂಗೇನಾಗಿದೆ ಪೂರ್ತಿ ಬಿಡಿಸಿ ಹೇಳು, ಕಡೇಪಕ್ಷ ಆಗ್ಲಾದ್ರೂ ನಿನ್ನೀ ಪ್ರಶ್ನೆಗೆ ನಾ ಉತ್ರ ಕೊಡಕ್ಕಾದ್ರೂ ಆಗ್ಬೋದು. ನೀ ಬಂದಾಗಿಂದ ಒಗಟಾಗೇ ಕೂತಿದ್ದೀ....' ನಿಜಕ್ಕೂ ಅವಳಿಗೇನೋ ಆಗಿದೆ ಎನ್ನುವ ಖಾತ್ರಿಯಲ್ಲಿ ಪ್ರೀತಿಯಿಂದ ಅವಳ ಕೈಹಿಸುಕಿದೆ ಧೈರ್ಯ ಕೊಡುವಂತೆ.
               ನನ್ನಿಂದ ತನ್ನ ದೃಷ್ಟಿಯನ್ನು ಮತ್ತೆ ಶಕುಂತಳೆ ಹರಿಯಬಿಟ್ಟಿದ್ದು ರಾಧಾಕೃಷ್ಣರ ಚಿತ್ರದೆಡೆಗೇ. ಅದನ್ನೇ ತೀರಾ ಭಾವುಕಳಾಗಿ ನೋಡುವ ಅವಳ ನೋಟದಾಳದಲ್ಲಿ ಏನೇನು ಮಂಥನ ನಡೆಯತೊಡಗಿತೋ......!.....
                                                                           *             *             *
               'ದುಷ್ಯಂತ್, ನನಗೀ ಬದುಕು ಸಾಕಾಗಿದೆ. ನಿಮ್ಮ ಓಡಾಟ, ಪ್ರಾಜೆಕ್ಟು, ಡೆಲಿಗೇಷನ್ನು ಇನ್ನಾದ್ರೂ.... ಇನ್ನಾದ್ರೂ ಸ್ವಲ್ಪ ಕಮ್ಮಿಮಾಡಿ. ನಂಗೆ ನೀವಿಲ್ದೇ ಒಂಟಿಯಾಗಿ ರಥ ಎಳ್ದು ಸಾಕಾಯ್ತು. ನೇಹ ತನ್ನದೇ ಲೋಕ ಕಟ್ಕೊಳ್ತಾ ಇದಾಳೆ. ಹರಯಕ್ಕೆ ಕಾಲಿಡ್ತಿರೋರ ಹಸಿಬಿಸಿ ಬಯಕೆಗಳು ನಿಂಗೂ ಗೊತ್ತಿರೋದೇ. ಅವಳ ಚೆಲ್ಲಾಟ ಮಿತಿಮೀರ್ತಿದೆ ಅಂತ ನಂಗನ್ನಿಸ್ತಿದೆ. ನಾನೂ ಹೇಳಿ ಸೋತ್ಬಿಟ್ಟೆ ದುಷ್ಯಂತ್... ನನ್ನ ಮಾತು ಕೇಳಿದರೆ ಸಾಕು ಅಗ್ನಿಪರ್ವತದಂತೆ ಸಿಡೀತಾಳೆ. 'ಡ್ಯಾಡಿ ಒಂದಿನ ನಂಗೇನೂ ಹೇಳಲ್ಲ, ನೀ ಮಾತ್ರ ಒಂದೇಸಮ ಕೊರೀತೀಯಾ. ಕಮಾನ್ ಮಮ್ಮಿ, ಯಾವ ಕಾಲ್ದಲ್ಲಿದ್ದೀ ನೀನು, ಅಪ್ಡೇಟ್ ಆಗು, ನನ್ನ ಬಾಯ್ಫ್ರೆಂಡ್ಸ್ ಬಗ್ಗೆ ಕಿರಿಕ್ ಮಾಡ್ಬೇಡ...' ಹೀಗೆ ಸಿಡಿಯೋ ಮಗ್ಳನ್ನ ನೋಡ್ತಾ ನಾನು ಪಾತಾಳಕ್ಕಿಳ್ದಿದೀನಿ. ಇನ್ನು ರಾಹುಲ್, ಕಾಲೇಜಿಗೆ ಹೋಗ್ತಾನೆ, ಹೋಗೋದೊಂದೇ ಗೊತ್ತು, ಬರೋದಕ್ಕೆ ಸಮಯ ಯಾವ್ದು ಅಂತ ನಂಗಿನ್ನೂ ಗೊತ್ತಿಲ್ಲ.
               ಮಕ್ಕಳನ್ನ ನಾವು ಹುಟ್ಸಿದ್ರೆ ಮಾತ್ರ ಸಾಕಾ...ಅವ್ರಿಗೆ ಒಳ್ಳೆ ಮಾರ್ಗದರ್ಶನ, ಸಂಸ್ಕಾರ, ಬದುಕು ಕಟ್ಟಿಕೊಡೋದು ನಮ್ಮ ಮೊದಲ ಕರ್ತವ್ಯ. ಇದಕ್ಕೆ ನಿಮ್ಮ ಸಹಕಾರ ಬೇಕೇಬೇಕು ದುಷ್ಯಂತ್. ಹೆಣ್ಣುಮಕ್ಳು ತಂದೇನ ಆದರ್ಶವಾಗಿ ಇಟ್ಕೋತಾರೆ, ಅವರ ಸಾನ್ನಿಧ್ಯ ಬಯಸ್ತಾರೆ ಅಂತ ನಿಮ್ಗೊತ್ತಿಲ್ವಾ...? ಇದಕ್ಕೆ ಪುಷ್ಠಿಕೊಡೋ ಶೋಧನೆಗಳೂ ಇವೆ. ನೀವು ಅವ್ಳಿಗೆ ಸಮಯ ಕೊಡಿ ದುಷ್ಯಂತ್.  ಅವ್ರಿಗೆ ನಿಮ್ಮ ನೆರಳಿನ ತಂಪೂ ಬೇಕು. ಪ್ಲೀಸ್, ಸಾಧನೆ ಅನ್ನೋ ಹೆಸರಿನ ಸುತ್ತಾಟ ಕಮ್ಮಿ ಮಾಡ್ಕೊಳ್ಳಿ. ಕಡೇಪಕ್ಷ ನಿಮ್ಮ ಫ್ರೆಂಡ್ಸ್ ಜೊತೆಗಿನ ಸುತ್ತಾಟವಾದ್ರೂ ಕಮ್ಮಿ ಮಾಡಿ....' ......
                                                                           *             *             *

               'ಪಾರೂ, ಬದುಕಿನ ಬುತ್ತಿಯಲ್ಲಿ ನಾವು ಏನೇನು ಕಟ್ಟಿ ತಂದಿದ್ದೀವಿ, ಯಾವ ಯಾವ ಘಟ್ಟದಲ್ಲಿ ಏನೇನು ಸಿಕ್ಕೀತು, ಸಿಕ್ಕಿದ್ದು ಮಾತ್ರ ನಮ್ಮ ಪಾಲು, ನಾವು ಕೇಳಿಕೊಂಡು ಬಂದಿದ್ದು; ನಮ್ಮದಲ್ಲದ್ದು ನಮಗೆ ಸಿಕ್ಕೋದೇ ಇಲ್ಲ.... ಹೀಗೆಲ್ಲಾ ಹೇಳೋದು ನಿಜವಾ...? ಹಾಗಿದ್ದರೆ, ಇಲ್ಲಿ ನಮ್ಮ ಪ್ರಯತ್ನಗಳು, ಮಾನಸಿಕ ದೃಢತೆ, ನಿಷ್ಠೆಯ ನಿರ್ಧಾರ ಇವಕ್ಕೆಲ್ಲಾ ಬೆಲೆಯೇ ಇಲ್ವಾ...?ಇವೆಲ್ಲಾ ವ್ಯರ್ಥನಾ...?' 
               ಶಕುಂತಳೆ ಕೇಳಿದಳು.
               'ಅಂದರೆ, ದುಷ್ಯಂತನೊಡನೆ ಇವಳು ಸಾಮರಸ್ಯದ ಬದುಕು ಕಂಡಿಲ್ಲ. ಸುಂದರ ಮಾಯಾಲೋಕದ ದಾಂಪತ್ಯ ಕಟ್ಟಿಕೊಂಡಿದ್ದಾಳೆ, ಬೆಳದಿಂಗಳು-ಚಕ್ರವಾಕದ ಸುರತಸಂಭ್ರಮದ ಹೆಜ್ಜೆಗಳಲ್ಲಿ ತೋಯುತ್ತಿದ್ದಾಳೆ ಎಂದು ನಾ ಇದುವರೆಗೆ ಅಂದುಕೊಂಡಿದ್ದೆಲ್ಲ ಭ್ರಮೆಯೇ...?' ಅವಳ ಮಾತುಗಳಿಗೆ ನಾನು ದ್ರವಿಸಿಹೋದೆ. ಅವಳ ಅಂತರಾಳದಲ್ಲಿ ಹೆಪ್ಪುಗಟ್ಟಿರಬಹುದಾದ ನೋವಿನ ಒಂದೆಳೆ ನನ್ನ ಕಣ್ಣಮುಂದಾಡಿತ್ತು. ಬದುಕಿನ ತತ್ವಗಳ ಕುರಿತು ಹೀಗೆಲ್ಲ ಕೇಳಬೇಕಾದರೆ, ಅವಳ ಎದೆಯಲ್ಲಿ ದೊಡ್ಡ ಕೋಲಾಹಲವೇ ನಡೆಯುತ್ತಿರಬೇಕು ಎನ್ನುವ ಸತ್ಯವೂ ಬಿಚ್ಚಿಕೊಂಡಿತ್ತು. 'ಛೇ, ಇಷ್ಟು ಕಾಲ ನಾನವಳನ್ನು ಹೇಗಿದ್ದೀಯ ಎಂದು ವಿಚಾರಿಸಬೇಕಿತ್ತು. ಮೇಲ್ನೋಟಕ್ಕೆ ಕಂಡಿದ್ದೆಲ್ಲ, ಕೇಳಿದ್ದೆಲ್ಲ ಸತ್ಯ ಎಂದು ಕುರುಡಾಗಿ ನಂಬಬಾರದಿತ್ತು.
               ಹಿಂದೊಮ್ಮೆ ಶಕ್ಕೂ ವೈರಾಗ್ಯದ ಮಾತಾಡಿದಾಗ ನಾನು ಜೋರಾಗಿ ನಕ್ಕಿದ್ದು ನೆನಪಾಯ್ತು.
               'ಬದುಕು ಹೂವ್ವಿನಹಾಸಿಗೆ ಎನ್ನುವ ಮಾತು ನಂಬಿ, ಸುಳ್ಳುಭ್ರಮೆಯ ರೇಷಿಮೆಹೊದಿಕೆಯಲ್ಲಿ ಮಲಗಿ ಕಣ್ಮುಚ್ಚಿಬಿಡ್ತೀವಿ ಅಲ್ವೇನೇ?' ಶಕ್ಕೂ ಕೇಳಿದ ಪ್ರಶ್ನೆಗೆ ಬಿದ್ದುಬಿದ್ದು ನಕ್ಕಿದ್ದೆ. ಅವಳು ಪೆಚ್ಚಾದಂತೆ ಅನ್ನಿಸಿದರೂ ನನ್ನ ಅತೀವಿಶ್ವಾಸ ಆವತ್ತು ಮಾತನ್ನು ತಮಾಶೆಯೆಂದು ಭ್ರಮಿಸಿಬಿಟ್ಟಿತ್ತು. ಪಾಪ, ಶಕ್ಕೂಗೆ ನಿಜವಾಗ್ಲೂ ಭ್ರಮನಿರಸನ ಆಗಿತ್ತಾ, ದುಷ್ಯಂತನಿಂದೇನಾದ್ರೂ  ಅಪಚಾರಗಳು....?
               'ಶಕ್ಕೂ, ನೀ ಸುಖವಾಗಿಲ್ವಾ, ದುಷ್ಯಂತ್ ನಿನ್ನ ಚೆನ್ನಾಗಿ ನೋಡ್ಕೋತಿಲ್ವಾ....?' ಬೆದರುತ್ತಲೇ ಪ್ರಶ್ನಿಸಿದೆ.
               ನನ್ನೆಡೆಗೆ ತಿರುಗಿದ ಶಕ್ಕೂ ಕಂಗಳೇ ಒಡಲಾಳದ ನೋವು ಕಕ್ಕುವಂತೆ ಕೆರಳಿದ್ದವು. ರೆಪ್ಪೆಗಳು ತೋಯ್ದಂತಿತ್ತು. ಹೊರಗಷ್ಟೇ ಅಲ್ಲ, ಕಣ್ಣಾಳಕ್ಕೂ ಇಳಿದುನೋಡು ಎಂದು ಹೇಳುವಂಥ ನಿಸ್ತೇಜನೋಟವಿತ್ತು. ತುಟಿಗಳು ಚಲಿಸದೇ ಅಥವಾ ಹೇಗೆ ಹೇಳಲಿ ಎಂದು ಗೊತ್ತಿಲ್ಲದಂತೆ ಹೊಲಿದುಕೊಂಡಿದ್ದವು. ಯುಗಯುಗಗಳ ನೋವು ಒಂದೇ ಬದುಕಿನಲ್ಲುಂಡಂತ ಹೆಪ್ಪುಗಟ್ಟಿದ ಯಾತನೆ ಮುಖದಲ್ಲಿ ಢಾಳಾಗಿ ಕಾಣುತ್ತಿತ್ತು.
               'ಪಾರೂ, ಸುಖ ಅಂದ್ರೆ ಏನೆ...ಅಭಿಷೇಕ ಮಾಡುವಷ್ಟು ಹಣ, ಕಾರು, ಬಂಗಲೆ, ಆಳುಕಾಳು, ಒಡವೆವಸ್ತ್ರ... ಇದರಲ್ಲಿ ಯಾವುದು ಸುಖದ ಸಮೀಕರಣ...?' ಮತ್ತವಳ ನೋಟ ಗೋಡೆಯ ಮೇಲೆ ಹರಿಯಿತು. ಇವಳ್ಯಾಕೆ ಪದೇಪದೇ ಚಿತ್ರವನ್ನೇ ನೋಡುತ್ತಾಳೆ...? ನನ್ನೊಳಗೂ ಪ್ರಶ್ನೆ ಕಾಡುತ್ತಲೇ ಇತ್ತು. ಇರಲಿ, ಅವಳು ಅವಳಾಗಿಲ್ಲವೆನ್ನೋದಂತೂ ಸತ್ಯ. ದಿನ ಅವಳಂತರಂಗ ನನ್ನೆದುರು ಬಯಲಾಗಲೇಬೇಕು, ಅವಳ ಒಳಗುದಿ ಏನಿದೆಯೋ ಎಲ್ಲ ಭಾರ ತಾಳದೆ ಮಳೆಯಾಗಿ ಸುರಿಸಿಬಿಡುವ ಕಾರ್ಮೋಡದಂತೆ ಹುಚ್ಚು ರಭಸದಲ್ಲಿ ಸುರಿದು ಹಗುರಾಗಿ ಬಿಡಲಿ, ಮತ್ತಲ್ಲಿ ಶುಭ್ರ ಆಕಾಶ, ಬೆಳ್ಮೋಡ, ಮುಂಜಾವಿನ ಹೊಸತನ ಎಲ್ಲ ಮೂಡಲಿ, ನನ್ನ ಶಕ್ಕೂ ನಿರಾಳಳಾಗಲಿ....
               ಮನಸ್ಸು ಆತ್ಮಸಾಕ್ಷಿಯಾಗಿ ಬಯಸಿತು. ಪ್ರೀತಿಯಿಂದ, ತಾಯ ಕಕ್ಕುಲತೆಯಿಂದ ಅವಳ ಕೈ ಹಿಡಿದೆ,
               'ಹೇಳು ಶಕ್ಕೂ, ನಿಂಗೇನಾಗಿದೆ, ನಾನು ನಿಂಗೆ ಯಾವ ರೀತಿ ಸಹಾಯ ಮಾಡಿ ನಿನ್ನನ್ನೀ ತಳಮಳದಿಂದ ಹೊರತರಲಿ ಹೇಳು ಶಕ್ಕೂ...?' ಇಷ್ಟು ಕೇಳುವಾಗ ನನ್ನೊಳಗೂ ಕಲಕಿಹೋಗಿತ್ತು. ಶಕ್ಕೂ ಮಾತಾಡದೆ ನನ್ನ ಮಡಿಲಲ್ಲಿ ತಲೆಯಿಟ್ಟಳು. ಅವಳು ಗಟ್ಟಿಯಾಗಿ ರೋದಿಸಲಿಲ್ಲ. ಆದರೆ, ಎದೆಗುದಿ ಬಿಟ್ಟೀತೇ, ಸದ್ದಿರದೆ ಅವು ಹನಿಹನಿಗಳಾಗಿ ನನ್ನ ತೊಡೆತಾಕಿ ಹೆಪ್ಪುಗಟ್ಟಿಸತೊಡಗಿದವು.......
                                                                           *             *             *

               'ನೀವು ನನ್ನ ಕಾಲೊರೆಸು ಎಂದು ಭಾವಿಸಿದ್ದೀರ. ದುಷ್ಯಂತ್, ಯಾಕ್ಹೀಗೆ ಹಿಮದಂತೆ ತಣ್ಣಗಿದ್ದೀರ...? ನೀವು ನನ್ನ ಮುಟ್ಟಿ ಆರುತಿಂಗಳಾಗಿದೆ. ದಿನ ಕಾರಣ ಹೇಳಲೇಬೇಕು....'
               'ನಿಂಗೆ ಯಾವಾಗ್ಲೂ ಅದೇ ಜಪ ಅಲ್ವಾ...?' ದುಷ್ಯಂತನ ವ್ಯಂಗ್ಯದಮಾತು, ಅದರಲ್ಲಿ ತುಂಬಿದ್ದ ತಾತ್ಸಾರ, ಕಂಗಳ ಹರಿತನೋಟ ಶಕುಂತಳೆಯನ್ನು ಕೆರಳಿಸಿತು. ಎದೆತುಂಬ ಈಗಾಗಲೇ ತುಂಬಿಕೊಂಡಿದ್ದ ನಿರಾಸೆ, ಹೆಬ್ಬಂಡೆಯಷ್ಟು ನೋವಿನ ಜೊತೆ ಕೋಪದಕುದಿಯೂ ಸೇರಿಕೊಂಡಿತು. ಅವನನ್ನು ಗಟ್ಟಿಯಾಗಿ ತಬ್ಬಿಹಿಡಿದಿದ್ದ ತೋಳುಗಳನ್ನು ಹಾವು ಮೆಟ್ಟಿದಂತೆ ಸರಕ್ಕನೆ ಹಿಂದಕ್ಕೆಳೆದುಕೊಂಡಳು. ಜಾರಿದಸೆರಗನ್ನೂ ಹೊದ್ದುಕೊಳ್ಳದಷ್ಟು ಆವೇಗದಲ್ಲಿ ಎದ್ದವಳೇ ದೀಪ ಹಾಕಿದಳು. ಮುಖ ಉರಿಯುತ್ತಿತ್ತು. ಕೆಂಪಗೆ ಸುಡುವಂತಿತ್ತು. ಎದೆ ವೇಗವಾಗಿ ಏರಿಳಿಯುತ್ತಿತ್ತು ಕಾಮದಮಲಿನಿಂದಲ್ಲ, ಮಿತಿಮೀರಿದ ಕೋಪದಿಂದಾಗಿ...
               ಕಣ್ಣಿನ ಮೇಲೆ ಕೈ ಅಡ್ಡವಿಟ್ಟು ಹಿಮದಷ್ಟೇ ತಣ್ಣಗೆ ಮಲಗಿದ್ದ ದುಷ್ಯಂತನ ಕೈ ಹಿಡಿದೆಳೆದಳು.
               'ಇದೇ ಮಾತನ್ನು ನಿಮ್ಮ ತೆವಲಿನ ಅಗತ್ಯತೆಯಲ್ಲಿ ನಾನೂ ಕೇಳಬೇಕಿತ್ತು.' ಸುಡುವಷ್ಟು ಕೋಪದಲ್ಲಿ ಮಾತು ಹೊರಟಿತ್ತು. ಒಂಟಿತನದ ಅಳಲು ಬಿಕ್ಕಾಯಿತು; ಸುಡುವಕಾಮ ಕಿಡಿನುಡಿಯಾಗಿ ಹಿಂದೇ ಘೋರನಿರಾಸೆ, ಅವಮಾನಗಳಿಂದ ಜರ್ಝರಿತವಾಯಿತು;
                ಮನಸ್ಸು ದೈನ್ಯತೆಯಿಂದ, ಮತ್ತೆ ಪ್ರೀತಿಯ ಆದ್ರ್ರತೆಯಲ್ಲೇ ಕೇಳಿತ್ತು...
               'ಕಾರ್ಯೇಷು ದಾಸಿ, ಕರಣೇಷು ಮಂತ್ರಿ.....' ಹೀಗೆಲ್ಲಾ ಸುಂದರಬದುಕು ನಿಮಗೆ ಕೊಟ್ಟಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ ಹೀಗೆ....! ಓಹ್, ಯಾಕ್ಹೀಗೆ ದುಷ್ಯಂತ್...? ನನ್ನೆದೆ ಸುಟ್ಟು ಹೋಗ್ತಿದೆ. ನನ್ನ ಬದುಕೇ ನಾಶವಾಗ್ತಿದೆ. ಬಯಲಲ್ಲಿ ನಿಂತ ಒಂಟಿಮರದ ಹಾಗೆ ಸಂಸಾರದ ಮಳೆ, ಛಳಿ, ಗಾಳಿಗಳನ್ನು ಎದುರಿಸಿ ಬಳಲಿ ಹೋಗಿದ್ದೀನಿ. ಆದರೆ, ಎಲ್ಲಕ್ಕೂ ನಂಗೆ ಧೈರ್ಯ, ಉತ್ಸಾಹ, ಶಕ್ತಿ ಕೊಟ್ಟಿದ್ದು ನೀವು ನನಗಿದ್ದೀರೆಂಬ ಭ್ರಾಂತಿಯಲ್ಲಿ, ನಿಮ್ಮ ಪ್ರೀತಿ ನನ್ನದೆಂಬ ಕುರುಡುನಂಬಿಕೆಯಲ್ಲಿ... ನಿಮ್ಮ ಪ್ರೀತಿಯ ಮಾಯೆಯಲ್ಲಿ ನಾನು ಕೊಚ್ಚಿಹೋದ, ಕಳೆದುಹೋದ ಪುಟ್ಟಝರಿಯಾಗಿದ್ದೆ. ಆದರೆ, ನೀವು ಕಡಲಿನಂತೆ ನನ್ನೆಲ್ಲ ಪ್ರೀತಿಯನ್ನೂ ಆಪೋಶನ ಮಾಡಿ ನನ್ನ ಇರವನ್ನೇ ನಾಶ ಮಾಡ್ಬಿಟ್ರಿ. ನಾನು ನಾನಾಗಲೂ ಇಲ್ಲ, ನಿಮ್ಮವಳಾಗೂ ಉಳಿದಿಲ್ಲ....!
               ಪ್ಲೀಸ್ ದುಷ್ಯಂತ್, ನೀವಿಲ್ದೇ ನಾನು ಶೂನ್ಯ.... ನನ್ನಿಂದೇನಾದ್ರೂ ತಪ್ಪಿದ್ರೆ ಹೀಗಲ್ಲ, ಹೀಗೆ ಅಂತ ಬಾಯ್ಬಿಟ್ಟು ಹೇಳಿ. ನನ್ನ ದೂರ ಇಡ್ಬೇಡಿ, ನಾನು ಜೀವಂತಶವ ಆಗಿಬಿಡ್ತೀನಿ...'
                                                                           *             *             *

               'ಪಾರೂ, ದುಷ್ಯಂತನೆಂಬ ಕಡಲು ನನ್ನನ್ನು ನುಂಗಿಬಿಡ್ತು ಕಣೆ. ಕ್ಷಣಿಕ...ತೀರ ಕ್ಷಣಿಕಕಾಲ ನಾನವನಲ್ಲಿ ಒಂದಾಗಿದ್ದು. ಜೀವನದಲ್ಲಿ ಹಣ, ಕೀರ್ತಿ, ಕೆಲಸದ ಯಶಸ್ಸು, ಮತ್ತೇನೋ ಬಣ್ಣಗಳ ಸೆಳೆತ ಅಮಲಿನಲ್ಲಿ ಕಳೆದುಹೋದ ನನ್ನ ದುಷ್ಯಂತ....'               
         ಶಕುಂತಳ ಗಳಗಳನೆ ಅಳತೊಡಗಿದಳು, ಎಲ್ಲವೂ ನಾಶವಾದಂತೆ ಬಿಕ್ಕಿದಳು. ಪಾರ್ವತಿಯನ್ನು ಗಟ್ಟಿಯಾಗಿ ತಬ್ಬಿದಳು. ಶಕುಂತಳೆಯ ಬಾಳು ಶಿಶಿರದಂತೆ ಬರಡಾಗಿತ್ತು, ವಸಂತ ಇನ್ನಿಲ್ಲದಷ್ಟು ಘಾಸಿಗೊಳಿಸಿದ್ದ, ಮೊಗೆಮೊಗೆದು ತುಂಬಿಕೊಟ್ಟ ಸುಧಾಪಾತ್ರೆಯನ್ನು ಬರಿದಾಗಿಸಿಬಿಟ್ಟಿದ್ದ. ಬರಿಯ ನಿರಾಸೆ, ವಿರಹದ ತಹತಹ, ಹೆಜ್ಜೆಗೆ ಸೇರಿಸದ ಹೆಜ್ಜೆಗಳು,ಒಂಟಿಯಾತ್ರೆ, ಹೆಪ್ಪುಗಟ್ಟಿ ಕಾಡುವ ದಿಕ್ಕೆಟ್ಟ ಪ್ರೀತಿ....!
                 'ಅಳಲಿ, ದುಃಖವೆಲ್ಲ ಹರಿದುಹೋಗಿಬಿಡಲಿ' ಎಂದೇ ಪಾರ್ವತಿ ಅವಳ ಬೆನ್ನು ನೇವರಿಸುತ್ತ ಮೌನವಾಗುಳಿದಳು. ಹೊರೆಗೂದಲ ಮೇಲೆ ಕೈಯ್ಯಾಡಿಸುತ್ತ ಕಣ್ತುಂಬಿಕೊಂಡಳು.... ಒಂದಿಷ್ಟುಕಾಲ ಹೀಗೆ ಸರಿವಾಗಲೇ ಹೊರಗಡೆ ಮಳೆಯ ಆರ್ಭಟ ಮತ್ತೂ ಹೆಚ್ಚಿತ್ತು. ಪಟಪಟನೆಂದು ಆಲಿಕಲ್ಲು ಬೀಳುವ ಸದ್ದು, ದಪ್ಪದಪ್ಪ ಹನಿಗಳ 'ಭರಭರ 'ಎನ್ನುವ ಸದ್ದು, ಮಿಂಚುಗುಡುಗಿನ ನಡುಗಿಸುವ ಶಬ್ದಗಳು ಶಕ್ಕೂ ಸಂಕಟದ ಸೂತಕದಂತೇ ಪಾರ್ವತಿಗನ್ನಿಸಿತು. 'ಪ್ರಕೃತಿಗೆ ಯಾವಾಗಲೂ ಸಂಕಟವೇ....? ಹೆಣ್ಣಿಗೇಕೆ ನಿರಂತರ ಶೋಷಣೆ...?'
               'ಯಾಕೆ, ನೀನೂ ಹೆಣ್ಣಲ್ವಾ, ನೀನು ಸುಖವಾಗಿದ್ದೀಯಲ್ಲ...?' ಅಂತರಂಗ ಕೇಳಿತು. 'ಹೌದು, ನಾ ಸುಖಿ. ವಿಜಯ್ನಂಥ ಸಂಗಾತಿ ನನ್ನೆಷ್ಟು ಜನ್ಮದ ಪುಣ್ಯದ ಫಲವಾಗಿ ಸಿಕ್ಕವನೋ...!  ಗಂಡಿನ ಧೋರಣೆ, ಶೋಷಣೆಯಲ್ಲಿ ಹೆಣ್ಣು ನಿರಂತರವಾಗಿ ನೋಯುತ್ತಾಳೆ, ಇದು ಪುರುಷಸಮಾಜ ಎನ್ನುವ ಮಾತಿಗೆ ನನ್ನ ಬದುಕಂತೂ ಅಪವಾದವೇ ಸರಿ. ಸಂಸಾರದಲ್ಲಿ ಏರಿಳಿತವಿದ್ದರೂ, ವಿಜಯ್ನಿಂದ ಮಾತ್ರ ನಾನು ಕ್ಷಣಕ್ಷಣವೂ ಸುಖದ ಬದುಕನ್ನು ಮೊಗೆಮೊಗೆದು ಸವಿದವಳೇ...!
               'ಪಾರೂ....' ಶಕ್ಕೂ ಕರೆದಾಗ ಬೆಚ್ಚಿದೆ. ತಲೆಯೆತ್ತಿದ ಶಕ್ಕೂ ತೀರ ಬಳಲಿದಂತೆ ಕಂಡಳು. ಮುಖ ಕಣ್ಣೀರಲ್ಲಿ ತೋಯ್ದಿತ್ತು. ಯುಗಯುಗಗಳ ಯಾತನೆಯನ್ನುಂಡಂತಿದ್ದ ಜೋಡಿಕಂಗಳನ್ನೇ ನೋಡುತ್ತಾ ನಾ ಮತ್ತಷ್ಟು ಕಲಕಿಹೋದೆ. ಏನನ್ನೋ ಹೇಳಲು ಬಾಯಿತೆರೆಯ ಹೊರಟೆ,  ಶಕ್ಕೂ ಮಾತು ತಡೆದಿತು, 
               'ಪಾರೂ, ಗಂಡಸರಿಗ್ಯಾಕೆ ಹೆಂಡತಿ ಬಹಳಬೇಗ ಕಾಲಕಸವಾಗಿ ಬಿಡ್ತಾಳೆ. ಅವಳೆಷ್ಟೇ ಚೆನ್ನಾಗಿರ್ಲಿ, ಬುದ್ಧಿವಂತೆಯಿರ್ಲಿ, ಗುಣವಂತೆಯಿರ್ಲಿ ಸಪ್ತಪದಿ ತುಳಿದ ಒಂದಷ್ಟು ದಿನಕ್ಕೇ ಅವಳು ಹಳಸಲಾಗೋದಾದ್ರೂ ಯಾಕೆ...?'
               'ಹಾಗೇನಿಲ್ಲ ಶಕ್ಕೂ, ಎಲ್ರೂ ಹಾಗಿರೋಲ್ವೇ. ಬಹುಷಃ ನೀನು ದುಷ್ಯಂತನ್ನ ಸರಿಯಾಗಿ ಅರ್ಥಮಾಡ್ಕೊಳ್ಲಿಲ್ವಾ..?' ನನ್ನೊಳಗಿನ ಅನುಮಾನವನ್ನು ಕಕ್ಕಿದೆ. ಶಕ್ಕೂಳನ್ನು ಹೀಗೆ ಪ್ರಶ್ನಿಸಲು ನನಗೆ ನೋವಾಗಿದ್ದರೂ, ಮನದ ಮೂಲೆಯಲ್ಲೆದ್ದ ಪ್ರಶ್ನೆಯನ್ನು ಎಸೆದಿದ್ದೆ. ಶಕ್ಕೂ ನನ್ನನ್ನೇ ದಿಟ್ಟಿಸಿದಳು. ನೋಟದ ತೀಕ್ಷ್ಣತೆ ನನ್ನ ಹೃದಯವನ್ನೇ ಇರಿದಂತಿತ್ತು. ಶೂನ್ಯದೆಡೆ ದೃಷ್ಟಿ ನೆಟ್ಟಳು. ಎದೆಬಗೆದು ಹುಗಿದಿದ್ದೆಲ್ಲಾ ಗೋರಿಯಿಂದೆತ್ತುವ ಬಗೆ ಹೇಗೆಂದು ಚಿಂತಿಸಿದಳೇನೋ....! ಈಗ ನನ್ನೆಡೆ ನೋಡುತ್ತಾ,
               'ಪಾರೂ, ಹೆಣ್ಣು ಸಂಸ್ಕಾರದ ಮೂಸೆಯಲ್ಲಿ ಹಾಕಿಟ್ಟ ದ್ರವ ಕಣೆ. ದುಷ್ಯಂತನಂಥವನು ಸಂಗಾತಿಯಾದಾಗ ಅದನ್ನು ಕಾಯಿಸಿ ಕಾಯಿಸಿ ಯಾವ ಮಟ್ಟಕ್ಕೆ ಹದಮಾಡಿಡುತ್ತಾನೆಂದರೆ, ಅದು ತನ್ನತನವನ್ನೇ ಮರೆತುಬಿಡುತ್ತದೆ. ನಾನೂ ಹೀಗೆ ಕಾಯಿಸಿದ್ದನ್ನೆಲ್ಲಾ ಪ್ರೀತಿಯಸೆಳೆತದಲ್ಲಿ ಸಹಿಸಿ, ಪ್ರೀತಿಯ ಇನ್ನೊಂದು ಮುಖವೇ ಇದೆಂದು ತಪ್ಪಾಗಿ ಅರ್ಥೈಸಿಕೊಂಡುಬಿಟ್ಟೆ. ತಗ್ಗಿದೆ, ಬಗ್ಗಿದೆ, ಕುಗ್ಗಿದೆ...ಎದೆತುಂಬ ಪ್ರೀತಿಯ ಹಣತೆ ಹಿಡಿದು ಅವನಿಗೆ ಬೆಳಕಾದೆ. ಕಣ್ಣಲ್ಲಿ ಸಂಜ್ಞೆ ಮಾಡಿದ್ದನ್ನು ಜಿಂಕೆಯಂತೆ ಓಡಾಡಿ ಪೂರೈಸಿದೆ. ರಾತ್ರಿ ವೇಶ್ಯೆಯಾದೆ, ಹಗಲು ದಾಸಿಯಾದೆ...ಅಮ್ಮನಾದೆ, ಮಂತ್ರಿಯಾದೆ... ಎಲ್ಲವೆಲ್ಲ... ಆದರೆ, ಎಲ್ಲವನ್ನೂ ಉಂಡ ದುಷ್ಯಂತ ನನ್ನ ಆತ್ಮಸಂಗಾತದ ಪರಿಧಿಗೆ ಬರಲೇ ಇಲ್ಲ. ನನ್ನ ಹೆಜ್ಜೆಗೆ ಹೆಜ್ಜೆ ಸೇರಿಸಲಿಲ್ಲ, ಅವನ ಹೆಜ್ಜೆಗೆ ಹೆಜ್ಜೆ ಸೇರಿಸಲೂ ನನಗಾಸ್ಪದ ಕೊಡಲಿಲ್ಲ. ನನ್ನ ಸುಂದರಭಾವಕೋಶವನ್ನು ನಿರ್ದಯಿಯಾಗಿ ನುಚ್ಚುನೂರಾಗಿಸುತ್ತ, ಅವನದೇ ಕೋಟೆ ಕಟ್ಟಿಕೊಂಡ, ಅಲ್ಯಾವ ಬಣ್ಣಗಳಿದ್ದವೋ ಗೊತ್ತಾಗಲಿಲ್ಲ, ಕೋಟೆ ಬೇಧಿಸುವ ನನ್ನ ಪ್ರಯತ್ನದಲ್ಲಿ ನಾನು ಪೂರ್ತಿ ಸೋತೆ. ಇದಕ್ಕಿಂತ ವಿಪರ್ಯಾಸ ಬೇಕಾ...?'
               'ನನಗೆ ಅವನಿಲ್ಲದೆ ಸುಖಪಡುವುದು ಗೊತ್ತಾಗಲಿಲ್ಲ, ಅವನ ಉದಾಸೀನಕ್ಕೆ ಔದಾಸೀನ್ಯದ ನಡತೆಯ ಉತ್ತರದಲ್ಲಿ ಸಿಕ್ಕಿಸಬೇಕೆನ್ನುವುದೂ ತಿಳಿಯಲಿಲ್ಲ, ಅವನು ಅವನ ಸುಖವರ್ತುಲವನ್ನು ರೂಪಿಸಿಕೊಂಡಂತೆ ನಾನೂ ನನ್ನ ಸುಖವರ್ತುಲ ಕಟ್ಟಿಕೊಳ್ಳಬಹುದೆನ್ನುವ ಕನಿಷ್ಠಜ್ಞಾನವೂ ನನಗಾಗಲಿಲ್ಲ. ಸೂರ್ಯನ ಸುತ್ತ ಸುತ್ತುವ ಭೂಮಿಯಂತೆ ಸಹನಾಶೀಲೆಯಾಗಿ, ಅವನ ಸುತ್ತಲೇ ಮನಸ್ಸಿನ ಪರಿಭ್ರಮಣ ನಡೆಸಿದೆ. ಅವನ ಧ್ಯಾನದಲ್ಲೇ ಮೀರಳಾಗುತ್ತ, ನನ್ನೆಲ್ಲ ಸಂತೋಷ, ಸುಖ ಅವನಿಂದ ಮಾತ್ರ ಎಂದು ಕಂದಾಚಾರದ ಪರಾವಲಂಬಿಯಾಗಿಬಿಟ್ಟೆ. ಇದು ನನ್ನ ಸಂಸ್ಕಾರದ ಫಲವಾ....ಗೊತ್ತಿಲ್ಲ...!  ಅವನಾಚೆಗೂ ಬದುಕಿದೆ ಎಂದು ತಿಳಿಯದ ಮೌಢ್ಯತೆ ವಿದ್ಯಾವಂತೆಯನ್ನೂ ಅಮರಿಕೊಳ್ತು ಅಂದ್ರೆ, ಪ್ರೇಮ-ಪ್ರೀತಿಗೆ ಎಂತಹ ಶಕ್ತಿ ಎಂದು ಆಶ್ಚರ್ಯವೂ ಆಗುತ್ತೆ ಅಲ್ವಾ ಪಾರೂ ಅಥವಾ ಭೂಮಿಯ ಮೇಲೆ ಸಿಗದ ದೈವೀಕಪ್ರೀತಿಯನ್ನು ಬಯಸಿಬಿಟ್ನಾ...?'
               ನಿಧಾನವಾಗಿ, ಬಹಳ ಸಂಯಮದಿಂದ ಅಗ್ನಿಪರ್ವತ ಒಳಗಿನ ಲಾವಾ ಕಕ್ಕುತ್ತಿತ್ತು. ಕಕ್ಕದೆ, ಬಿಕ್ಕದೆ ಇನ್ನು ಅಲ್ಲಿರಲು ಸಾಧ್ಯವಿಲ್ಲವೆನ್ನುವಂಥ ಒತ್ತಡ, ಆದರೂ, ಪ್ರಕೃತಿ ತೀರ ಸಹನೆಶೀಲೆಯಾಗಿ ವರ್ತಿಸಿದ್ದಾಳೆ... ನಾನವಳನ್ನೇ ಕನಿಕರದಿಂದ ನೋಡಿದೆ. ಜೀವಕ್ಕೆ ಹೀಗೊಂದು ನೋವು...! ಒಳಗು ತಲ್ಲಣಿಸಿತು. ಆದರೂ, ಮತ್ತೊಂದು ಅನುಮಾನವನ್ನು ಕಕ್ಕಿದೆ.
               'ನೀನು ಅವನ ಕಷ್ಟವೇನು ಅಂತ ತಿಳಿಯೋ ಪ್ರಯತ್ನ ಮಾಡ್ಲಿಲ್ವಾ...?' ಕೇಳಿ ನಾಲಿಗೆ ಕಚ್ಚಿಕೊಂಡೆ. ಅವಳ ಕಂಗಳಲ್ಲಿ ಅನಾಯಾಸ ನೀರು ಸುರಿಯುತ್ತಿತ್ತು.
               'ನೀನ್ಹೀಗೆ ಕೇಳಬೇಕಾದ್ದೇ. ಎಲ್ಲರೆದೆಯಲ್ಲೂ ಹೀಗೇ ಪ್ರಶ್ನೆಗಳು ಏಳಬಹುದು. ಆದರೆ ಪಾರೂ, ಅವನ ಕಣ್ಣಿಗೆ ಯಾವ ಬಣ್ಣದ ಗಾಜು ಅಡ್ಡನಿಂತು ಬಣ್ಣದ ಮಾಯಾಚಿತ್ರಗಳನ್ನು ಬಿಡಿಸುತ್ತಿತ್ತೋ ನಂಗೆ ತಿಳೀಲಾಗಲಿಲ್ಲ. ಒಂದು ಭಾರತೀಯ ಹೆಣ್ಣು ಎಷ್ಟು ಸೋತು ಒರಗಬಹುದೋ ಅಷ್ಟೂ ಸೋತೆ. ಅನುನಯ, ಪ್ರೀತಿಯ ಉತ್ತುಂಗ, ಕೋಪ, ಹತಾಶೆ, ದೈನ್ಯತೆ, ಯಾಚನೆ, ವಾಸ್ತವ ಎಲ್ಲ....ಎಲ್ಲ ರೀತೀನೂ ಬೆತ್ತಲಾಗಿಬಿಟ್ಟೆ ಪಾರೂ. ಇನ್ನೇನು ಉಳಿಯಲಿಲ್ಲ. ಇದೆಲ್ಲದರ ಪರಿಣಾಮ ಏನು ಗೊತ್ತಾ...?' ಒಂದುಕ್ಷಣ ಕಣ್ಮುಚ್ಚಿದಳು. ದೀರ್ಘ ನಿಟ್ಟುಸಿರು ಹೊರಹಾಕಿದಳು.
               ಕಣ್ತೆರೆದು,
               'ಪಾರೂ, ನನಗೀಗ ನಲವತ್ತೈದು ದಾಟಿದೆ, ಸೀತೆ ಹದಿನಾಲ್ಕುವರ್ಷ ವನವಾಸ ಮಾಡಿದ್ದರೂ ಅವಳ ಜೊತೆ ಪ್ರಾಣಪದಕವಾಗಿ ರಾಮನಿದ್ದ.... ಆದರೆ, ಈಗ ನಾಲ್ಕುವರ್ಷದಿಂದ ನನ್ನದು ವನವಾಸ ದುಷ್ಯಂತನಿದ್ದೂ ಇಲ್ಲದೆ..... '
               'ಶಕ್ಕೂ..... ಏನೇ ಹಾಗೆಂದ್ರೆ...?'
               'ದುಷ್ಯಂತ ನನ್ನಿಂದ ಮಾನಸಿಕವಾಗಿ ಮಾತ್ರ ದೂರಾಗಿಲ್ಲ, ದೈಹಿಕವಾಗಿ ಕೂಡ. ಮೆತ್ತನೆಯ ಹಾಸಿಗೆ, ವಿನ್ಯಾಸದಮಂಚದಲ್ಲಿ ಇಬ್ಬರ ನಡುವೆ ಅಡಿಯ ಅಂತರ ಸೃಷ್ಟಿಸಿಬಿಟ್ಟ. ಮೇಲೆಬೀಳುವ ಸೂಳೆಯಾದೆ. ಅವನಲ್ಲಿನ ನನ್ನ ಮೇಲಣ ಕಾಮ ಎಚ್ಚರಗೊಳ್ಳಲೇ ಇಲ್ಲ. ಮೂರುಕಾಸಿನ ಮಾನ ಹರಾಜಾಗುತ್ತಾ ಬಂದು ಇದೀಗ ನಾನೇ ಅಂತರಕ್ಕೆ ಒಗ್ಗಿಕೊಂಡಿದ್ದೀನಿ. ನೀರವರಾತ್ರಿಗಳಲ್ಲಿ ಪಕ್ಕದಲ್ಲಿ ಅವನಿದ್ದೂ ವಿರಹಾಗ್ನಿಯಲ್ಲಿ ಬೇಯುತ್ತ, ದಿಂಬು ತೋಯಿಸುತ್ತೇನೆ, ನಿಃಶ್ಯಬ್ದವಾಗಿ ಅಳುತ್ತಾ...! ಅವನೀಗ ನನ್ನ ಪಾಲಿಗೆ ಶಿಲೆ. ಅಲ್ಲಿ ಯಾವ ಆದ್ರ್ರತೆಗಳೂ, ಪ್ರೀತಿಯೂ ಉಳಿದಿಲ್ಲ. ಅವನ ದೇಹದ ಹಸಿವನ್ನು ಅವನು ಹೇಗ್ಹೇಗೋ ಪೂರೈಸಿಕೊಳ್ಳುತ್ತಿರುವ ವಾಸನೆ ನನಗೆ ಬಡಿದಿದೆ. ಗಂಡಸಿಗೆ ಬೇಕಾದ್ದನ್ನು, ಬೇಕಾದಲ್ಲಿ, ಬೇಕಾದಂತೆ ಪೂರೈಸಿಕೊಳ್ಳುವ ತಾಕತ್ತು, ಸ್ವಾತಂತ್ರ್ಯ ಎಲ್ಲ ನೆಲದಲ್ಲಿದೆ. ಆದರೆ, ಹೆಣ್ಣಿಗೆ...ನನ್ನಂಥ ಹೆಣ್ಣಿಗೆ...'ಮನೆ ಕಟ್ಟುವ ಹೆಣ್ಣಿಗೆ'...? ಹೊಟ್ಟೆಗೆ ಮಾತ್ರ ಹಸಿವಲ್ಲ ಪಾರೂ, ಹೃದಯಕ್ಕೂ ಅಗಾಧ ಹಸಿವಿದೆ. ಪ್ರೀತಿ, ಪ್ರಣಯ ಎಂಬ ಆಹಾರವಿಲ್ಲದೇ ಹೋದರೆ ಹಸಿವು ಪೆಡಂಭೂತವಾಗಿ ಕಾಡುವುದು ಕಣೆ. ಪ್ರೀತಿಯ ಹಿತಸ್ಪರ್ಷ, ಹಿತವಾಗಿ ಹೃದಯಕ್ಕೊತ್ತಿಕೊಳ್ಳುವ ಆಸರೆ.... ಯಾವುದೂ ಇಲ್ಲದೆ...?'  ಈಗ ಶಕ್ಕೂ ಅಳುತ್ತಿರಲಿಲ್ಲ. ನಿರ್ಭಾವುಕವಾಗಿ ಯಾರದ್ದೋ ಕಥೆ ಹೇಳುವಂತೆ ಕಂಡಳು.....
               'ಪಾರೂ, ಬದುಕೆಷ್ಟು ಅನಿರೀಕ್ಷಿತಗಳ ಸರಮಾಲೆ ಅಲ್ವಾ, ಇದ್ದಿದ್ದು ಮಾಯವಾಗಿ, ಇಲ್ಲದ್ದು ಕಣ್ಣಮುಂದಾಡುವುದು ಎಂಥ ಸೋಜಿಗ...! ಪ್ರೀತಿ ಸತ್ತಿತು ಎಂದಾಗಲೇ, 'ಇಲ್ಲ, ನಾನು ಫೀನಿಕ್ಸ್ ಪಕ್ಷಿ, ಬೂದಿಯಿಂದಲೇ ಏಳುತ್ತೇನೆ ಎಂದು ಮೆಲ್ಲನುಲಿಯುತ್ತ, ಎದೆಯಂಗಳಕ್ಕೆ ಧುತ್ತನೆ ಬಂದು ಅರಳಿಸೋದು ಹೇಗೇ...?' ಥಟ್ಟನೆ ಬಂದ ಮಾತುಗಳು, ಅವಳಲ್ಲಾದ ಬದಲಾವಣೆ, ಅರಳುಗಂಗಳು, ಮುಖದ ತುಂಬ ಗೆಲುವು....ಓಹ್, ನನಗಂತೂ ತೀರಾ ಗೊಂದಲವಾಯ್ತು. ಇವಳು ಹೇಳಹೊರಟಿದ್ದಾದರೂ ಏನೆನ್ನುವುದೇ ಅರ್ಥವಾಗದೆ, 'ಶಕ್ಕೂ, ಇದೇನೇ...?' ಮತ್ತೇನೂ ಕೇಳಲು ತೋಚಲಿಲ್ಲ.
               ಈಗವಳು ಮತ್ತೆ ರಾಧಾಕೃಷ್ಣರ ಚಿತ್ರದೆಡೆಗೇ ಚಿತ್ತ ಹೊಕ್ಕಿಸಿಬಿಟ್ಟಳು....
                                                                           *             *             *

               ಕಿಕ್ಕಿರಿದ ಸಭೆಯಲ್ಲಿ ಶಕುಂತಳೆ ತನ್ನಿಷ್ಟದ ಭಾವಗೀತೆ ಹಾಡುತ್ತಿರುವಾಗಲೇ, ಪ್ರಸಿದ್ಧ ಚಿತ್ರಕಾರ ಅದಕ್ಕೆ ತಕ್ಕ ಚಿತ್ರ ಬಿಡಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ. ಶಕುಂತಳೆ ನೋಡಿದಳು, ರೇಖಾಚಿತ್ರಗಳಲ್ಲಿ ಮೂಡಿರುವ ಪುರುಷನ ವಿರಹವೇದನೆ, ಅವನ ಕಂಗಳಲ್ಲಿ ಚಿತ್ರಿತವಾದ ಪ್ರೇಯಸಿಯ ಚಿತ್ರ ಅದ್ಭುತವಾಗಿರುವುದನ್ನು ನೆಟ್ಟನೋಟದಲ್ಲಿ ನೋಡಿದಳು. ಅವನೆಡೆಗೊಂದು ಮುಗುಳ್ನಗೆ ಎಸೆದಾಗ, ಅವನೂ ಪ್ರತಿಕ್ರಯಿಸಿದ್ದ....'
                                                            *             *             *

               'ಪಾರೂ,  ಅದು ಅಲ್ಲ್ಲಿಗೇ ಮುಗಿಯಬಹುದಿತ್ತು ಕಣೆ, ಆದರೆ, ಮುಗಿಯಲಿಲ್ಲ, ಹೀಗೆ ಬರೆದಿತ್ತಾ ನಂಗೊತ್ತಿಲ್ಲ. ನಾನು ಹೆಸರುಮಾಡಿದ ಗಾಯಕಿಯಲ್ಲದಿದ್ರೂ, ಒಂದಷ್ಟು ಕಡೆ ಹಾಡಿದವಳು, ನನ್ನ ಹಾಡನ್ನು ಮೆಚ್ಚಿ ಅಭಿನಂದಿಸಿದವರು ಬಹಳಮಂದಿ. ನಿಜ, ನಾನು ವಿರಹಗೀತೆಗಳನ್ನು ಮನತುಂಬಿ ಹಾಡಿಬಿಡ್ತೀನಿ ಅಂತ ನಿಂಗೇ ಗೊತ್ತು. ಹೌದು, ಇದು ಹಾಡಲ್ಲವೇ, ನನ್ನ ಪಾಡು,  ನನ್ನೊಳಗಿನ ಕುದಿ, ನೋವು ತೀವ್ರವಾಗಿ ಹೊರಹಾಕುವ ಪರಿ....' ಶಕ್ಕೂ ಮೌನವಾದಳು. ಎದೆಯ ಕಾರ್ಮೋಡ ಮತ್ತೆ ದಟ್ಟೈಸುವಂಥ ಭಾವ ಮುಖದಲ್ಲಿತ್ತು.
               'ಪಾರೂ, ಅವನ ಪರಿಚಯ ತೀರಾ ಸಾಧಾರಣವಿತ್ತು. ಒಂದೆರಡು ಬಾರಿ ಯಾರಿಗಾಗಿಯೋ ಆತ ನನ್ನನ್ನು ಹಾಡುತ್ತೀರಾ ಎಂದು ವಾಟ್ಸಾಪ್ನಲ್ಲಿ ಕಾಂಟ್ಯಾಕ್ಟ್ ಮಾಡಿದ್ದ. ಅಲ್ಲವನ ಭೇಟಿಯೇನೂ ಆಗಲಿಲ್ಲ. ಅವನ ಪರಿಚಯಕ್ಕೆ ನಾನೇನೂ ಅರಳಲಿಲ್ಲ, ಬಿರಿಯಲಿಲ್ಲ. ನಿಜ ಹೇಳಬೇಕೆಂದರೆ, ನನಗೆ ದುಷ್ಯಂತನ ಹೊರತಾಗಿ ನನ್ನ ಪರಿಧಿಗೆ ಬಂದ ಯಾವ ಗಂಡೂ ಪುರುಷಪ್ರತೀಕವಾಗಿ ಸೆಳೆಯಲಿಲ್ಲ. ನನ್ನ ದೃಷ್ಟಿಯಲ್ಲಿ ಗಂಡೆಂದರೆ, ಪ್ರೀತಿಯೆಂದರೆ ಅದು ಕಾಡಿದರೂ, ಬರಡಾಗಿಸಿದರೂ ದುಷ್ಯಂತ ಮಾತ್ರವೇ ಆಗಿಬಿಟ್ಟಿದ್ದ. ಇದು ಸುಳ್ಳಲ್ಲ ಪಾರೂ, ನನ್ನೆದೆ ಬಗೆದು ತೋರಿಸಲು ಸಾಧ್ಯವಿದ್ದರೆ...!' ಶಕ್ಕೂ ಮಾತು ನಿಲ್ಲಿಸಿದಳು. ಎದೆಯಲ್ಲಿ ಮಡುಗಟ್ಟಿದ್ದ ನೋವು ರೆಪ್ಪೆಯಂಚಲ್ಲಿ ಕೂತು  'ಧುಮುಕಲೇ' ಎನ್ನುತ್ತ ಸಿದ್ಧವಾಗಿತ್ತು. 'ನಾ ನಂಬುತ್ತೇನೆ ಶಕ್ಕೂ...' ಕೈಹಿಡಿತ ಬಿಗಿಯಾಗಿಸಿದೆ. ತಲೆಕೆಳಹಾಕಿದವಳ ರೆಪ್ಪೆಯಂಚಿನ ನೋವು ಮಾತು ಕೇಳಿ ದಳದಳನೆಂದು ಸುರಿಯಿತು. 'ಛೇ, ಎಷ್ಟೊಂದು ದುಃಖ ಹಿಡಿದಿಟ್ಟಿದ್ದಾಳೆ..' ನನ್ನ ಹೃದಯ ವಿಲವಿಲನೆಂದಿತು.
               ಸೆರಗು ಕಣ್ಣಿಗೊತ್ತಿ ತಲೆಯೆತ್ತಿದಳು ಶಕುಂತಳೆ.  ಕಪ್ಪುಕೊಳದಲ್ಲಿ ಒಂದು ನಕ್ಷತ್ರ ಮಿನುಗಿದಂತೆ ನನಗನ್ನಿಸಿತು. ಸುಳ್ಳಲ್ಲ, ನೋವಿನ ಹಿಂದೆ ಮಿಂಚಿನ ಬೆಳಕಾಡಿತ್ತು, ಕಾರ್ಮೋಡದ ಅಂಗಳದಲ್ಲಿ ಫಳ್ಳೆಂದು ಬೆಳಕಿನ ಕೋಲ್ಮಿಂಚೊಂದು ಸುಳಿದಂತೆ....! ನನಗೆ ವಿಸ್ಮಯದ ಕುರಿತು ತೀರಾ ಕುತೂಹಲ ಉಕ್ಕಿತು..
               'ಇಲ್ಲಿ ಬೇರೊಂದೇ ಕಥೆಯ ತಿರುವಿದೆಯಾ' ಸಂಶಯ ಹೊತ್ತಿತು,  ಅವಳ ಮುಖವನ್ನೇ ನೋಡಿದೆ....
               'ಪಾರೂ, ಅವನು ಸದ್ದಿಲ್ಲದೆ ಬರಿದಾಗಿದ್ದ ನನ್ನೆದೆಯಂಗಳಕ್ಕೆ ಕಾಲಿಟ್ಟೇಬಿಟ್ಟ ಕಣೆ. ಹೇಗೆ ಬಂದ, ಯಾಕೆ ಬಂದ ಗೊತ್ತಾಗಲೇ ಇಲ್ಲ. ನನ್ನೆದೆಯಂಗಳದ ಪ್ರೀತಿಜಲ ಬತ್ತಿದ್ದು ಅವನಿಗೆ ತಿಳೀತಾ, ಅದು ಬರಡಾಗಿ ಖಾಲಿಯಾದ ಸಿಂಹಾಸನ ಎಂದು ತಿಳೀತಾ, ಹೂವುಹಸಿರು ಕಳಚಿಕೊಂಡ ಶಿಶಿರದ ಇಳೆಯೆಂದು ತಿಳಿಯಿತಾ, ಎದೆಗೂಡು ಪುರುಷ ಪಿಸುಗಿಗಾಗಿ ಕಾದಿದೆ ಎಂದು ತಿಳಿಯಿತಾ ಅಥವಾ ಕೇವಲ ಹೆಣ್ಣೆಂಬ ಕಾರಣಕ್ಕೆ ನನ್ನಲ್ಲಿ ಅವನಿಗೆ ಆಸಕ್ತಿ ಮೂಡಿತಾ...? ನಾನು ಬದುಕಿನ ಯಾನದಲ್ಲಿ ಅವನನ್ನು ಎಲ್ಲರಂತೆ ಸಿಕ್ಕ ಒಬ್ಬ ಸಹೃದಯನೆಂದೇ, ಸಭ್ಯಸ್ನೇಹದ ಒಳಗೆ ಹಾರ್ದಿಕವಾಗಿ ಸ್ವಾಗತಿಸಿದೆ. ಅವನು ಹೂವ್ವಿನ ಚಿತ್ರಗಳೊಂದಿಗೆ ಗುಡ್ಮಾರ್ನಿಂಗ್  ಎಂದು ಮೆಸ್ಸೇಜ್ ಕಳಿಸಿದಾಗ ನಾನೂ ಪ್ರತಿಕ್ರಯಿಸಿದೆ. ನನಗೂ ಹೂಗಳೆಂದರೆ ಪರಮಪ್ರೀತಿ. ಇವು ಗೌರವಸೂಚಕ ಎಂದೇ ಗೌರವಾನ್ವಿತನಿಗೆ ಕಳಿಸುತ್ತ ಮುಂದುವರೆದೆ. ನಾನು ದಡ್ಡಿ ಪಾರೂ, ನನಗರ್ಥವಾಗಲಿಲ್ಲ, ಅವನು ರಾಧಾಕೃಷ್ಣರ ಪ್ರೇಮಪೂರಿತ ಚಿತ್ರಗಳೊಂದಿಗೆ ನಿತ್ಯ ಕಾಣಿಸಿಕೊಂಡಾಗ ನಾನು ಗೊಂದಲಕ್ಕೆ ಬಿದ್ದರೂ ಇಂದು ಒಬ್ಬ ಗಂಡಸಿನೊಡನೆ ಸ್ನೇಹ ಬೆಳೆಸೋದು ಅಪರಾಧ, ತಪ್ಪು ಅಂತ ಯಾರೂ ಪರಿಗಣಿಸೋಲ್ಲ, ಹೀಗೆಂದೇ  ನನಗೆ ನಾನೇ ಹೇಳಿಕೊಳ್ಳುತ್ತ ನಡೆದೆ. ಆದರೆ, ಪಾರೂ, ಅವನು ಬರಿಯ ಸ್ನೇಹಿತನಾಗಲಿಲ್ಲ, ಪ್ರೇಮಿಯಾಗಿ ರೂಪಾಂತರ ಹೊಂದಿಬಿಟ್ಟಿದ್ದ. ನಾನು ಅನುಮಾನಕ್ಕೀಡಾದೆ, ಬೇಕೆಂದೇ ಮೆಸ್ಸೇಜ್ ಕಳಿಸದೆ ಬಿಟ್ಟೆ. ದಿನ, ರಾಧಾಕೃಷ್ಣನ ಚಿತ್ರಗಳು, ಕೆಂಪುಹೃದಯ ಹಾರಾಡುವ ವೀಡಿಯೋಗಳು, ಜೊತೆಗೆ, ನಾನೇ ಹಾಡಿದ್ದ,
               'ಹಗಲು ನಿನ್ನ ಧ್ಯಾನವೇ ಇರುಳು ಕಣ್ಣು ಕೂಡದೇ
               ಸಿಹಿಯನೋವಿನಲ್ಲಿ ಗೆಳತೀ ಮನ ನಿನ್ನನೆ ಕನಸುತಿದೇ...' ಹಾಡಿನಸಾಲುಗಳನ್ನು ತನ್ನದೇ ದನಿಯಲ್ಲಿ ಹಾಡಿ ಕಳಿಸಿಬಿಟ್ಟ...! ನಾನು ದುಃಖದಲ್ಲಿ ಅತ್ತೆ. ಉಮರ್ ಖಯ್ಯಾಮ ಹೇಳುತ್ತಾನೆ, 'ನಾನವನ ಬಯಸಿ ಬೆಂದಿರಲು, ನನ್ನನೇ ಬಯಸಿ ಬೇಯುತ್ತಿರುವನೊಬ್ಬ....' ಎಂಥ ವಿಪರ್ಯಾಸ ಪಾರೂ...! ಎಲ್ಲವನ್ನೂ ಕಳಕೊಂಡಂತೆ ಅತ್ತೆ. ಅವನ ಮೇಲೆ ಸಿಟ್ಟುಕ್ಕಿತು. ನನ್ನ ಪರಿಚಯ ಕೂಡ ಅಷ್ಟಿಲ್ಲ, ನಾನು ಎಳೆಯ ತರುಣಿಯೂ ಅಲ್ಲ, ಸುರಸುಂದರಿಯೂ ಅಲ್ಲ, ಹೀಗಿದ್ದೂ.... ಅವನೂ ತರುಣನಲ್ಲ ಬಿಡು. ನನ್ನ  ಹರಯದವನೆ ಇರಬಹುದು. ಹೆಸರುಮಾಡಿದ ಕಲಾವಿದ. ನನ್ನ ಮೇಲೇಕೆ ಮೋಹವೋ ಇನ್ನೂ ಗೊತ್ತಾಗಿಲ್ಲ...
               ಪಾರೂ, ಇದಕ್ಕೆಲ್ಲ ಕಾರಣವೇ ಇರಬೇಕಿಲ್ಲ ಅಲ್ವಾ...? ಯಾವಾಗ ಎಲ್ಲಿ, ಹೇಗೆ ಮನ್ಮಥ ಹೂಬಾಣ ಹಿಡಿದು ಕಾದು ಮೆಲ್ಲನೆಸೆದು ಎದೆಗಾಯ ಮಾಡಿಯೇ ಬಿಡ್ತಾನೆ ಅನ್ನೋದು ಯಾರೂ ತಿಳಿಯದ ವಿಸ್ಮಯ. ನಾನು  ಹೆಜ್ಜೆ ಹಿಂದಿಟ್ಟಷ್ಟೂ ಅವನು ಹಿಂದೆ ಸರಿಯದೇ ಮೆಸ್ಸೇಜ್ ಕಳಿಸುತ್ತಲೇ ಹೋದ. ರಾಧಾಕೃಷ್ಣ ನನ್ನ ವಾಟ್ಸಾಪಿನಲ್ಲಿ ದಿನದಿನವೂ ಕಾಣಿಸಿಕೊಂಡರು. ಕೃಷ್ಣನ ಕೊಳಲನಾದದ ಗುಂಗಿಗೆ ನಾನು ಮೆಲ್ಲ ಸೋಲುತ್ತ ಹೋದೆ, ಕಳೆದುಹೋದೆ, ಎರಡು ವಸ್ತುಗಳು ಏಕಕಾಲಕ್ಕೆ ಒಂದೇ ಬಿಂದುವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಸಿದ್ಧಥಿಯರಿಯೊಂದಿದೆ ನೋಡು, ದುಷ್ಯಂತನಿಂದ ಖಾಲಿಯಾದ ಜಾಗವನ್ನು ಇವನು ಮೆಲ್ಲನಾಕ್ರಮಿಸಿಕೊಂಡುಬಿಟ್ಟ....' ಹೇಳುತ್ತ ನಿಜಕ್ಕೂ ಕಳೆದೇಹೋದವಳನ್ನು ನಾನು ದಂಗಾಗಿ ನೋಡಿದೆ.
               ಶಕ್ಕೂ ಲೋಕದಲ್ಲಿ ಇದ್ದಂತೆ ನನಗೆ ಕಾಣಲಿಲ್ಲ. 'ಅಯ್ಯೋ, ಇದೆಂಥ ಸುಳಿಗೆ ಸಿಕ್ಕಿದ್ದಾಳೆ, ಇದು ತಪ್ಪಲ್ವಾ...? ಇದು ಅವಳನ್ನು ಬಾಣಲೆಯಿಂದ ಬೆಂಕಿಗೇ ಇಳಿಸಿದರೆ...?' ನಡುಗಿಹೋದೆ. ಏನಾದರೂ ಮಾಡಲೇಬೇಕು, ಅವಳ ನೋವಿಗೆ ಇದು ತಕ್ಷಣದ ಪರಿಹಾರವಿರಬಹುದು, ಬೆಂಗಾಡಿನಲ್ಲಿ ಹಸಿರು ಉಕ್ಕಿಸಿರಬಹುದು, ಬಿಳಿಯ ಹಾಳೆಯ ಮೇಲೆ ಚಂದದ ಕಾವ್ಯ ಬರೆಯುತ್ತಿರಬಹುದು, ಆದರೂ, ವಿವಾಹದ ಚೌಕಟ್ಟಿನಾಚೆಯ ಪ್ರೀತಿಪ್ರೇಮ ಸಫಲವಾಗುತ್ತಾ....? ಮತ್ತಷ್ಟು ನೋವು, ಅಪಮಾನಗಳಿಗೆ ಸಿಕ್ಕಿಬಿಟ್ಟರೆ... 'ಶಕ್ಕೂ...' ಎಚ್ಚರಿಸಲು ಕರೆದೆ. ಅವಳು ಉನ್ಮಾದದ ಸುಳಿಯಲ್ಲಿದ್ದಳು. ಮತ್ತೆ ಕರೆದೆ, ಭುಜ ಹಿಡಿದು ಅಲ್ಲಾಡಿಸಿದೆ. ಬೆಚ್ಚಿ, 'ಏನು ಪಾರೂ..?' ಎಂದವಳನ್ನು ತುಂಬ ಕನಿಕರ, ಪ್ರೀತಿಯಿಂದ ತಬ್ಬಿಕೊಂಡೆ,

               
'ಶಕ್ಕೂ, ಅವನು ಶ್ರೀಸೇನನಾ...?'          'ಊಹ್ಞೂಂ..'
               'ಗಿರಿಧರ್...'  'ಅಲ್ಲ' 'ಪ್ರಸೂನ್..'  'ಊಹ್ಞೂಂ...'
               'ರಾಧೇಶ್, ರಮಣ್, ಮಣಿಕಂಠ್...'
               'ಪಾರೂ, ನಿಲ್ಲಿಸೆ. ಅವನು ಹೆಸರು ನನ್ನಲ್ಲೇ ಉಳಿದುಹೋಗಲಿ. ಜಗಕ್ಕೆ ತಿಳಿಯೋದು ಬೇಡ. ಅವನು ಗೌರವಾನ್ವಿತ, ಕೀರ್ತಿವಂತ, ನಾನವನ ಪ್ರತಿಭೆಯನ್ನು ಇನ್ನಿಲ್ಲದಷ್ಟು ಆರಾಧಿಸ್ತೀನಿ. ಹಿಂದೆಯೂ ಅವನನ್ನು ಆರಾಧಿಸಿದ್ದೆ, ಮುಂದೆ ಕೂಡ.  ಹೀಗವನ ಎದೆಗೊಳ ಕಲಕಿದ್ದು ಅವನ ತಪ್ಪಲ್ಲ, ಇದು ಮನುಷ್ಯ ಸಹಜ ದೌರ್ಬಲ್ಯ...'
               'ಅಂದರೆ, ನೀನವನ ಪ್ರೇಮಪಾಶಕ್ಕೆ ಬಿದ್ದಿದೀಯಾ...?' ಅನುಮಾನಿಸುತ್ತಲೇ ಕೇಳಿದೆ.
               'ಇಲ್ಲವೆಂದರೆ ಆತ್ಮಸಾಕ್ಷಿಗೆ ಮೋಸ ಮಾಡಿದಂತಾಗುತ್ತೆ. ನಾನು ಸುಳಿಗೆ ಸಿಕ್ಕಲು ಇಚ್ಚಿಸಿರಲಿಲ್ಲ, ನನ್ನ ದುಷ್ಯಂತನ ಜಾಗಕ್ಕೆ ನಾನು ಯಾರನ್ನೂ ಕೂರಿಸಲಿಲ್ಲ, ಆದರೆ, ಬದುಕಿನೆಲ್ಲ ಬಯಕೆಗಳೂ  ನಿಲುಗಡೆಗೆ ಬರಲು ಅವನ್ನು ಅಷ್ಟಿಷ್ಟಾದರೂ ಸವಿದಿರಬೇಕಲ್ಲ. ಮೃಣ್ಮಯ ಶರೀರ, ಕೈಹಿಡಿದವ ಬೆಂಗಾಡು ಮಾಡಿಬಿಟ್ಟ. ಅತೃಪ್ತಿ ಅಡಿಮುಡಿ ಹೊತ್ತಿ ಕಾಡುತ್ತಿರುವಾಗ, ಮರುಭೂಮಿಯಲ್ಲೊಂದು 'ಮೃಗಜಲ' ಹೊಳೆಯುತ್ತಿದೆ, ಬೆಂದ ಹೃದಯ ಕ್ಷಣಿಕದ ರಂಗಿಗೆ ಅರಳಿದೆ ಕಣೆ. ನಾನವನಿಗೆ ಯಾವ ಸಂದೇಶವನ್ನೂ ಕಳಿಸದೆ ಸತಾಯಿಸಿದೆ. ಆದರೆ, ಅವನೊಂದು ದಿನ ಕಳಿಸದಿದ್ದಾಗ ನಾನು ಹೇಗೆ ಚಡಪಡಿಸಿಬಿಟ್ಟೆ ಗೊತ್ತಾ, ಇಡೀ ದಿನ ಮಂಕಾದೆ, ಕಾಲ್ಗಳು ಸೋತುಸೋತು ಕುಸಿಯುತ್ತಿದ್ದವು, ಎದೆ ಸುಡುತ್ತಿತ್ತು, ನನ್ನೆದೆಬಾನಿನ ಉದ್ದಗಲಕ್ಕೆ ನಿರಾಸೆಯ ಕಾರ್ಮೋಡ ಕವಿದು ನಾ ಕಂಗಾಲಾಗಿಬಿಟ್ಟೆ ಕಣೆ. 'ಇದು ಪ್ರೀತಿಯಾ'  ಎಂದು ದಿಗಿಲಾದೆ, 'ನಾನು ಎಡವುತ್ತಿರುವೆ' ಎಂದು ವ್ಯಥೆಪಟ್ಟೆ. ಪಾರೂ, ಅವನು ನನ್ನೆದೆಯಲ್ಲಿ ಮಲ್ಲಿಗೆ ಅರಳಿಸಿರುವುದು ಸತ್ಯ ಕಣೆ, ಮೋಡಕವಿದ ಆಗಸದಲ್ಲಿ ಸಂಜೆಯರಾಗಗಳ ಬೆಡಗಿಳಿಸಿರುವುದೂ ಸತ್ಯ ಕಣೆ,  ದೂರದಲ್ಲಿದ್ದೇ ನನಗೆ ಇನ್ನಿಲ್ಲದಷ್ಟು ಮಾನಸಿಕಬಲ ನೀಡುತ್ತಿದ್ದಾನೆ ಸತ್ಯ ಕಣೆ...
               ನಾನು ಇದುವರೆಗೂ ಅವನನ್ನು ಒಂದು ದಿನವೂ ಮಾತನಾಡಿಸಿಲ್ಲ, ಸಲಿಗೆಯ ಭೇಟಿ ಆಗಿಲ್ಲ, ಆದರೂ ಹೀಗೆ ಹತ್ತಿರದಲ್ಲಿ ಕೂತಿದ್ದಾನೆ. ಇವನೊಂದು ರೀತಿ ಸೂರ್ಯನಂತೆ, ದೂರದಲ್ಲಿದ್ದೇ ಬದುಕಿನಬಲ ನೀಡುತ್ತಾ, ನೂರೆಂಟು ಮುಂಜಾವದ, ಮುಸ್ಸಂಜೆಯ ಬಣ್ಣಗಳರಳಿಸಿ ಬದುಕಿಗೆ ಚೈತನ್ಯ ತುಂಬುತ್ತಿದ್ದಾನೆ. ಅವನಿರವು ಸತ್ಯ, ಆದರೂ ಹತ್ತಿರವಿರದೆ ಸುಳ್ಳೂ ಕೂಡ. ಅವನಿಲ್ಲಿ ಬರಲಾರ, ಬರಬಾರದು...ಆದರೆ, ಅವನಲ್ಲಿದ್ದಾನೆನ್ನುವ ಮಾನಸಿಕ ತೃಪ್ತಿಯಷ್ಟೇ ನಂಗೆ ಸಾಕು.
               ಸ್ನೇಹ-ಪ್ರೀತಿಗಳ ನಡುವಣ ಸೂಕ್ಷ್ಮಗೆರೆಯ ಸಾಂಗತ್ಯಕ್ಕೆ ಏನೆಂದು ಹೆಸರು ಕೊಡಲಿ.....?'
               ಹೀಗೆಲ್ಲ ಹೇಳುವ ಶಕ್ಕೂ ಬದುಕಿಗೆ ಅತೀತಳಾಗಿ ಬೆಳೆದಿರುವಳಾ ಅಥವಾ ಭ್ರಮೆಯಕೋಶದಲ್ಲಿ ಅಡಗುತ್ತಿದ್ದಾಳಾ, ತಿಳಿಯಲಿಲ್ಲ. ಅವಳ ಮಾತುಗಳು ತೀರ ನಿಗೂಢವಾಗುತ್ತಿದ್ದವು. ಇವಳೇನು ಬಯಸುತ್ತಿದ್ದಾಳೆ ಎಂದೇ ಅರ್ಥವಾಗದೆ, ಕಂಗಳನ್ನೇ ನೋಡಿದೆ. 
               'ಶಕ್ಕೂ, ಕಾಫಿ ತರಲಾ...?' ಅಸಂಬದ್ಧ ಪ್ರಶ್ನೆ ಕೇಳಿದೆ. ಶಕ್ಕೂ ಇಲ್ಲಿರಲಿಲ್ಲ, ಎಲ್ಲೋ ಭಾವಯಾನದಲ್ಲಿದ್ದಳು. ನೋವೋ, ನಲಿವೋ ಅಲ್ಲಿದ್ದದ್ದು ಗೊತ್ತಾಗಲಿಲ್ಲ. ಮತ್ತವಳು ತುಟಿಯೊಡೆವುದನ್ನೇ ಕಾದುಕುಳಿತೆ. ಹೊರಗೆ ಮಳೆಯಾರ್ಭಟ ಕಮ್ಮಿಯಾಗಿತ್ತು. ಸಣ್ಣಗೆ ಹನಿಯುವ ಟಪಟಪ ಸದ್ದು ಕೇಳುತ್ತಿತ್ತು. ಪ್ರಕೃತಿ ತನ್ನ ಮುನಿಸು, ದುಗುಡಗಳ ಕಳಚಿ ಒಂದಿಷ್ಟು ತಿಳಿಬೆಳಕಿಗೆ ತೆರೆದುಕೊಳ್ಳುತ್ತಿದ್ದಳು....
               ಶಕ್ಕೂ ಮೆಲ್ಲನೆ ಇಹಕ್ಕೆ ಬಂದಳು.
               ಮುಗುಳ್ನಕ್ಕಳು. ಅಚ್ಚರಿಯಿಂದ 'ಈಗೇನು..?' ಎನ್ನುವಂತೆ ನೋಡಿದೆ....
               'ಪಾರೂ, ಕುಂಭಕೋಣ ಮಳೆಯ ಆರ್ಭಟ ಇಳಿಯಿತು ಅಲ್ವಾ...?' ಹೌದೆಂದೆ...
               'ಪಾರೂ, ಬದುಕು ನೀಡಿದ ಬುತ್ತಿಗಳು ಸಾಕು ಕಣೆ. ಕಳೆದಿದ್ದನ್ನು ಕಳೆದುಕೊಂಡ ಜಾಗದಲ್ಲಿ ಮಾತ್ರ ಹುಡುಕಬೇಕು. ಎಷ್ಟೋ ಕಾಲದ ಸಾಂಗತ್ಯ, ಜೊತೆಗಳೇ ಬಣ್ಣಕರಗಿದ ಚಿತ್ರದಂತೆ ಅಳಿಸಿಹೋಗುವಾಗ, ನಡುಮಧ್ಯೆ ಸಿಕ್ಕ ಬಣ್ಣಗಳು ಉಳಿಯುತ್ತೇನೇ...ಅವು ಗಟ್ಟಿಯೇನೇ...ಅಲ್ಲಾವ ಗಟ್ಟಿಬಂಧ ಇರಲು ಸಾಧ್ಯ ಹೇಳು....? ಇವು ಪ್ರಕೃತಿ-ಪುರುಷನ ನಡುವಿನ ಕ್ಷಣಭಂಗುರ ಸೆಳೆತಗಳಷ್ಟೇ....! ನಾನು ಚಿತ್ರಕಾರನನ್ನು ದುಷ್ಯಂತನ ಸ್ಥಾನದಲ್ಲಿ ಪ್ರೇಮಿಸಲಾರೆ, ಹಾಗಂತ, ಬಣ್ಣಗಳೇ ಅಳಿಸಿಹೋದ ನನ್ನ ಬದುಕಿನ ಕ್ಯಾನ್ವಾಸ್ ಮೇಲೆ ಅವನು ಮೂಡಿಸಿರೋ ಚೂರು ಬಣ್ಣದ ಮಾಯೆಯನ್ನು, ಅರಳಿಸಿರುವ ಚಿತ್ರಗಳನ್ನು, ತುಂಬಿದ ಬಲವನ್ನೂ ತಿರಸ್ಕರಿಸಲಾರೆ. ಒಂದು ಹಿತವಾದ 'ಫ್ಲರ್ಟ್' ಅಂತೀಯಾ, ಹ್ಞಾಂ, ಅದೇ..! ನಾನು ಜಾರದ, ಸಂಸ್ಕಾರ ಕೆಡಿಸಿಕೊಳ್ಳದ, ಸ್ನೇಹದಗಡಿ ಮೀರದ ಅಂತರದಲ್ಲಿ ಅವನನ್ನು ನಿಲ್ಲಿಸಿ ನನ್ನ ಬದುಕಿನಲ್ಲಿ  ಬಣ್ಣ ಕಾಣುತ್ತೇನೆ. ಅವನನ್ನು ಕೆರಳಿಸುವುದಿಲ್ಲ, ಉತ್ತೇಜಿಸುವುದೂ ಇಲ್ಲ, ಭೇಟಿಯಾಗುವುದೂ ಇಲ್ಲ... ಅವನು ದೂರದಲ್ಲಿ ಸೂರ್ಯನಂತೆ ಹೊಳೆದು ನನ್ನ ಬದುಕಿಗೆ ಚೂರು ಕಿರಣಗಳ ಹಾಯಬಿಡಲಿ ಸಾಕು... ನಾ ಅಷ್ಟಿಷ್ಟಾದರೂ ಅರಳುತ್ತಿರುತ್ತೇನೆ. ನಾನು ಸಹ್ಯವಾಗಿದ್ದು ಹಾದಿಯಾಚೆ ನಿಂತ  ದುಷ್ಯಂತ,  ಮಕ್ಕಳಿಗೆ ನೀತಿಪಾಠ ನಾನಾಗಬೇಕಲ್ಲ...! ಜಾರುವುದು ಸುಲಭ, ಜಾರಿದಮೇಲೆ ಏಳುವುದೆಷ್ಟು ಕಷ್ಟ ಎನ್ನುವ ಪ್ರಜ್ಞೆಯಿದೆಯಲ್ಲ...! ನನಗೆ ನಾನೇ ಸಂಯಮದ ಬೇಲಿ ಕಟ್ಟಿಕೊಳ್ಳಬೇಕು ಪಾರೂ...
               ಇನ್ನು, ಅವನಿಗೂ ನಾನು ಅಗತ್ಯತೆಯಲ್ಲ, ಜಸ್ಟ್ ಪಾಸಿಂಗ್ ಕ್ಲೌಡ್....'
               ತೀರ ನಿರಾಶೆ, ಬಳಲಿಕೆ, ನೋವಿನಿಂದ ಕಂಗೆಟ್ಟಿದ್ದ ಶಕ್ಕೂಳನ್ನೇ ನೋಡುತ್ತ ನನ್ನೆದೆ ಕಲಕಿಹೋಯ್ತು. ಪ್ರೀತಿ, ಕನಿಕರದಿಂದ ಎದೆಗೊತ್ತಿಕೊಂಡೆ. ಮಗುವಿನಂತೆ ನನ್ನ ತಬ್ಬಿಬಿಟ್ಟಳು. ಕಂಗಳು ಒದ್ದೆಯಾಗೇ ಇದ್ದುದರ ಅನುಭವವಾಯ್ತು. 'ಶಕ್ಕೂ, ನಿನ್ನ ಸೂರ್ಯನಿಗೆ ಹಿಡಿದಿರುವ ಗ್ರಹಣ ಬಿಡಲಿ, ನಿನ್ನ ಎದೆಯಾಗಸ ಸಂಜೆಯವರ್ಣಗಳನ್ನು ಮತ್ತೆ ತುಂಬಿಕೊಳ್ಳಲಿ...' ಮನದುಂಬಿ ಹಾರೈಸುವಾಗ, ಶಕುಂತಳೆ,
               'ಪಾರೂ.....' ಎಂದಷ್ಟೇ ಉಸುರಿದಳು, ನಿಡುಸುಯ್ದಳು, ಒಳಗಿದ್ದ ಯಾತನೆಯನ್ನೆಲ್ಲಾ ಮತ್ತೊಮ್ಮೆ ಹೊರಹಾಕುವಂತೆ ಗಳಗಳ ಅತ್ತಳು.
               ಹೊರಗೆ ಮಳೆನಿಂತ ಆಗಸದಲ್ಲೀಗ ಮುಸ್ಸಂಜೆಯ ಮುಸುಕು ಮೆಲ್ಲನಾವರಿಸುತ್ತಿತ್ತು.
               'ಸುಡುತ್ತಿರುವ ನಿಂತನೆಲವನ್ನು ಧಿಕ್ಕರಿಸಲಾಗದೆ, ಹಸಿರೂಡಲು ಬಂದ ಘಳಿಗೆಯ ಅಪ್ಪಿಕೊಳ್ಳಲಾಗದೆ ಬೇಯುತ್ತಿರುವ ಶಕ್ಕೂ ಬಾಳಿಗೆ ನಾಳಿನ ಸಂಜೆಗಳು ಬಣ್ಣಗಳನ್ನು  ತುಂಬುವುವೇ....?'
               ನನ್ನೊಳಗಿನ ಪ್ರಶ್ನೆಗೆ ಉತ್ತರವಿರಲಿಲ್ಲ....

                                                                           *             *             *

                                        

   ಎಸ್.ಪಿ.ವಿಜಯಲಕ್ಷ್ಮಿ
               ಫ್ಲಾಟ್ ನಂ 305, ಚಾರ್ಟರ್ಡಮಡಿ ಅಪಾರ್ಟಮೆಂಟ್
                17ನೇ ಮುಖ್ಯರಸ್ತೆ, 2ನೇ ಹಂತ, ಜೆ,ಪಿ,ನಗರ
                                             ಬೆಂಗಳೂರು......78
                                             ಮೊ....9980712738